ಮಲ್ಲಸಂದ್ರ :
ಈ ಖಾಸಗಿ ಕಂಪನಿಯದ್ದು ಅದೆಂಥಾ ದರ್ಪ.. ಅದೆಂಥಾ ಅಟ್ಟಹಾಸ ನೋಡಿ..ನಿನ್ನೆ ಮೊನ್ನೆ ಬಂದಿರೋ ಇವ್ರು ಇಡೀ ಊರಿಗೆ ಊರನ್ನೇ ಖಾಯಿಲೆಗೆ ತಳ್ಳುತ್ತಿರೋದಲ್ಲದೇ, ಅದನ್ನ ಪ್ರಶ್ನಿಸೋಕೆ ಹೋದ್ರೆ ಗ್ರಾಮಸ್ಥರನ್ನೇ ಊರು ಬಿಟ್ಟು ಹೋಗಿ ಅಂತಾ ಹೇಳ್ತಿದ್ದಾರಂತೆ..ಹೌದು ಇದು ತುಮಕೂರು ನಗರದಿಂದ ಕೂಗಳತೆ ದೂರದಲ್ಲಿರೋ ಕಳ್ಳಿಪಾಳ್ಯದ ಗ್ರಾಮಸ್ಥರ ಪಾಡು.
ಈ ಊರಿನಲ್ಲಿ ಯಾರನ್ನೇ ನೋಡಿದ್ರೂ ಧಮ್ಮು…ಕೆಮ್ಮು..ಎದೆನೋವು, ಉಸಿರಾಟದ ಸಮಸ್ಯೆ ಇರೋರೇ ಕಾಣಿಸ್ತಾರೆ. ಡಸ್ಟ್ ಅಲರ್ಜಿಯಿಂದ ನರಳುತ್ತಿದ್ದಾರೆ. ಚಿಕ್ಕಮಕ್ಕಳಿಗೂ ಇದೇ ಸಮಸ್ಯೆ..ವಯಸ್ಸಾದವರ ಪಾಡನ್ನಂತೂ ಕೇಳೋ ಹಾಗೆಯೇ ಇಲ್ಲ. ಮಾರುತಿ ಬಿಲ್ಡರ್ಸ್ ಅನ್ನೋ ಈ ಕಂಪನಿಯೇ ಇದಕ್ಕೆಲ್ಲಾ ಕಾರಣ ಅನ್ನೋ ಆರೋಪ ಕೇಳಿಬಂದಿದೆ.
ಕಳ್ಳಿಪಾಳ್ಯ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಹಿಂದೆ ಮಾರುತಿ ಬಿಲ್ಡರ್ಸ್ ಅನ್ನೋ ಹೆಸರಿನ ಕಂಪನಿಯೊಂದು ತಲೆ ಎತ್ತಿದೆ. ರೈಲ್ವೇ ಹಳಿಗೆ ಬಳಸುತ್ತಾರಲ್ಲ, ಆ ಸಿಮೆಂಟ್ ದಿಮ್ಮಿಗಳನ್ನ ತಯಾರು ಮಾಡುವ ದೊಡ್ಡ ಕಂಪನಿಯಿದು. ಸೆಂಟ್ರಲ್ ಗವರ್ನಮೆಂಟ್ನಿಂದಲೇ ಟೆಂಡರ್ ಪಡೆದು ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ. ಆದ್ರೆ ಊರಿನ ಜನರಿಗೆ ಮಾತ್ರ ರೋಗಗಳನ್ನ ತಂದಿಡುವ ಕೆಲಸ ಮಾಡ್ತಿದೆ ಅಂತಾ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕಳ್ಳಿಪಾಳ್ಯ ಗ್ರಾಮದಿಂದ ಈ ಕಂಪನಿಗೆ ಕಡೆ ಹೋಗೋದಕ್ಕಿರೋದು ಒಂದೇ ಒಂದು ಮಣ್ಣಿನ ರಸ್ತೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹದಿನೈದಕ್ಕೂ ಹೆಚ್ಚು ಮನೆಗಳಿವೆ. ಆದ್ರೆ ಇದೇ ರಸ್ತೆಯಲ್ಲಿ ಪ್ರತಿನಿತ್ಯವೂ ಓವರ್ ಲೋಡ್ಗಳನ್ನ ಹೊತ್ತ ಲಾರಿಗಳು ಓಡಾಡುತ್ತಿದ್ದು, ಗ್ರಾಮಸ್ಥರು ಓಡಾಡೋದಕ್ಕಿದ್ದ ಒಂದೇ ಒಂದು ರಸ್ತೆ ಸಂಪೂರ್ಣವಾಗಿ ಕೆಟ್ಟುಹೋಗಿದೆ. ಜೊತೆಗೆ ಇಡೀ ದಿನ ಈ ರಸ್ತೆಯಲ್ಲಿ ಲಾರಿಗಳ ಓಡಾಟ ಇರೋದ್ರಿಂದ ಇಲ್ಲಿ ಏಳುವ ಧೂಳು ಇಡೀ ಊರಿಗೆ ಊರನ್ನೇ ಆವರಿಸಿಕೊಳ್ಳುತ್ತಿದೆಯಂತೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡೋದಕ್ಕೆ ಸಮಸ್ಯೆಯಾಗ್ತಿರೋದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ಊರಿನ ಜನರಿಗೆ ಉಸಿರಾಡೋದಕ್ಕೂ ಕಷ್ಟವಾಗ್ತಿದೆಯಂತೆ.
ಈ ಊರಿನಲ್ಲಿ ಸಾಕಷ್ಟು ಚಿಕ್ಕಮಕ್ಕಳಿದ್ದಾರೆ. ವಯೋವೃದ್ಧರಿದ್ದಾರೆ. ಇವರೆಲ್ಲರಿಗೂ ಇದೀಗ ಉಸಿರಾಟದ ಸಮಸ್ಯೆ ಎದುರಾಗಿದೆಯಂತೆ. ಯಾರನ್ನೇ ನೋಡಿದ್ರೂ ಧಮ್ಮು..ಕೆಮ್ಮು.. ಕೆಲವು ಮಕ್ಕಳಿಗೆ ಡಸ್ಟ್ ಅಲರ್ಜಿಯಾಗಿ ಆಪರೇಷನ್ ಕೂಡ ಮಾಡಿಸಲಾಗಿದ್ಯಂತೆ. ಇನ್ನು ಊರಿನ ಕೆಲವು ಹಿರಿಯರಿಗೆ ಹಾರ್ಟ್ ಆಪರೇಷನ್ ಆಗಿದ್ಯಂತೆ. ಅಂಥವರಿಗೆ ವೈದ್ಯರು ಸ್ವಲ್ಪ ವಾಕ್ ಮಾಡಿ ಅಂತಾ ಹೇಳಿದ್ದಾರಂತೆ. ಆದ್ರೆ ವಾಕ್ ಮಾಡೋದಿರ್ಲಿ..ಈ ಧೂಳಿನಲ್ಲಿ ಹೊರಗೆ ಬರೋದಕ್ಕೂ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ ಅಂತಾ ಗ್ರಾಮಸ್ಥರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ.
ಇನ್ನು ಈ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಗ್ರಾಮ ಪಂಚಾಯ್ತಿಯಿಂದ ಯಾವ ಪರವಾನಿಗೆಯನ್ನ ಕೂಡ ಪಡೆದಿಲ್ವಂತೆ. ಗ್ರಾಮ ಪಂಚಾಯ್ತಿಯವರೇ ಒಂದು ಬಾರಿ ಕರೆಸಿ ರಸ್ತೆ ಸರಿಪಡಿಸುವಂತೆ ತಾಕೀತು ಮಾಡಿದ್ರೂ ಕಂಪನಿಯವರು ಮಾತ್ರ ಕ್ಯಾರೇ ಅಂತಿಲ್ವಂತೆ. ಇನ್ನು ಇದನ್ನ ಗ್ರಾಮಸ್ಥರು ಪ್ರಶ್ನಿಸೋಕೆ ಹೋದ್ರೆ, ನೀವೇ ಬಿಟ್ಟು ಊರು ಬಿಟ್ಟು ಹೋಗಿ ಅಂತಾ ದಬ್ಬಾಳಿಕೆ ಮಾಡ್ತಿದ್ದಾನಂತೆ ಈ ಕಂಪನಿಯ ಜನರಲ್ ಮ್ಯಾನೇಜರ್ ಮಹೇಶ್..
ಇನ್ನು ಖಾಸಗಿ ಕಂಪನಿಯ ಅಟ್ಟಹಾಸದ ಬಗ್ಗೆ ಮಾಹಿತಿ ಬರ್ತಿದ್ದಂತೆ ನಿಮ್ಮ ಪ್ರಜಾಶಕ್ತಿ ತಂಡ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಳಲನ್ನ ಕೇಳುವ ಪ್ರಯತ್ನ ಮಾಡಿದೆ. ಬಳಿಕ ಗ್ರಾಮಸ್ಥರು ಹೀಗೆಲ್ಲಾ ಆರೋಪ ಮಾಡ್ತಿದ್ದಾರೆ ನೀವೇನ್ ಹೇಳ್ತಿರಾ ಅಂತಾ ಕಂಪನಿಯ ಜನರಲ್ ಮ್ಯಾನೇಜರ್ ಅವರನ್ನ ಕೇಳಿದ್ರೆ, ನಾವು ಅವರಿಗೆ ಏನೂ ಹೇಳೆ ಇಲ್ಲ. ನಮ್ಮಿಂದ ಗ್ರಾಮಸ್ಥರಿಗೆ ಯಾವ ತೊಂದರೆಯೂ ಆಗ್ತಿಲ್ಲ. ಅವರೇ ನಮ್ಮ ಮೇಲೆ ಹಲ್ಲೆ ಮಾಡೋಕೆ ಬರ್ತಾರೆ ಅಂತಾ ಹೇಳ್ತಿದ್ದಾರೆ.
ಒಟ್ಟಿನಲ್ಲಿ ಈ ಖಾಸಗಿ ಕಂಪನಿಯ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಖಾಯಿಲೆಗೆ ಒಳಗಾಗುವಂತಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸಮಸ್ಯೆಯನ್ನ ಬಗೆಹರಿಸಬೇಕಿದೆ.