ಮಧುಗಿರಿ:
ಮಧುಗಿರಿ ತಾಲೂಕಿನ ಹಿಂದೂಪುರ ಮೈನ್ ರೋಡ್‌ನಲ್ಲಿರೋ ಗೊಂಧಿಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗ ಇರೋ ಹೂವಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಇಲ್ಲದೇ ಹೂ ಬೆಳೆಗಾರರು ಪರದಾಡುವಂತಾಗಿದೆ. ಪೂರ್ವಜರ ಕಾಲದಿಂದಲೂ ಈ ಹೂವಿನ ಮಾರ್ಕೆಟ್‌ನಲ್ಲಿ ಹೂ ಬೆಳೆಗಾರರು ತಾವು ಬೆಳೆದ ಹೂವುಗಳನ್ನು ತಂದು ಮಾರಾಟ ಮಾಡುತ್ತಾರೆ. ಆದರೆ ಈ ಮಾರುಕಟ್ಟೆಯಲ್ಲಿ ಸೌಕರ್ಯಗಳೇ ಇಲ್ಲವಾಗಿದ್ದು ಹೂಗಳು ಬಾಡುವಂತಾಗಿದೆ.
ಹೇಳಿ ಕೇಳಿ ಮಧುಗಿರಿ ಬರ ಪೀಡಿತ ಪ್ರದೇಶವಾಗಿದ್ದು, ತಾಲೂಕಿನ ರೈತರು ಕಷ್ಟ ಪಟ್ಟು ಬಗೆ ಬಗೆಯ ಹೂವುಗಳನ್ನು ಬೆಳೆಯುತ್ತಿದ್ದಾರೆ. ತಾವು ಬೆಳೆದ ಹೂವುಗಳನ್ನು ಗೊಂಧಿಹಳ್ಳಿಗೆ ತಂದು ಹೂವಿನ ಮಾರಿಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ಮಾರುಕಟ್ಟೆಗೆ ಸೂಕ್ತವಾದ ಕಟ್ಟಡಗಳಿಲ್ಲ, ಇದರಿಂದ ಫುಟ್‌ಪಾತ್‌ನನ್ನೇ ಮಾರುಕಟ್ಟೆಯನ್ನಾಗಿ ಮಾಡಿಕೊಂಡು ಹೂವನ್ನು ಮಾರಾಟ ಮಾಡ್ತಾ ಇದ್ದಾರೆ. ಉರಿ ಬಿಸಿಲಿನಲ್ಲಿ ರೈತರು ಹೂವನ್ನು ವ್ಯವಹರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರಳಿಲ್ಲದೇ ರೈತರ ಹೂವುಗಳು ಬಾಡಿ ಹೋಗುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗ್ತಿದ್ದು ರೈತರು ಕಂಗಾಲಾಗಿದ್ದಾರೆ.
ಇನ್ನು ಗ್ರಾಮ ಪಂಚಾಯ್ತಿ ಮುಂಭಾಗದಲ್ಲೇ ಮಾರುಕಟ್ಟೆ ನಡೆಯುತ್ತಿದ್ದು ಹೂವಿನ ಬೆಳೆಗಾರರಿಗೆ ಬೇಕಾದ ಸೌಲಭ್ಯವನ್ನು ಒದಗಿಸುವಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬಿಸಿಲಿನ ಸಮಸ್ಯೆ ಒಂದು ಕಡೆ ಆದರೆ ಮತ್ತೊಂದು ಕಡೆ ನೀರಿನ ವ್ಯವಸ್ಥೆ ಕೂಡ ಇಲ್ಲ. ಬಡ ರೈತರು ದುಡ್ಡು ಕೊಟ್ಟು ನೀರನ್ನು ಕೊಂಡು ಕುಡಿಯಲು ಹಿಂದೇಟು ಹಾಕ್ತಾ ಇದ್ದು, ಇದರಿಂದ ರೈತರು ದಣಿವಿನಲ್ಲೇ ವ್ಯಾಪಾರ ಮಾಡುವಂತಾಗಿದೆ.
ಇನ್ನಾದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಹೂ ಮಾರಾಟಗಾರರಿಗೆ ಬೇಕಾದ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.