ಮೈಸೂರು : ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಹುಣಸೂರು ನಗರದ ಕಲ್ಕುಣಿಕೆಯ ಕುರ್ಜನ್ ಬೀದಿಯ ವಠಾರದಲ್ಲಿ ನಡೆದಿದೆ.
ನಿಂಗರಾಜು ಎಂಬುವರ ಮನೆಯಲ್ಲಿ ಸಿಲಿಂಡರ್ ಬದಲಾಯಿಸುವಾಗ ಗ್ಯಾಸ್ ಸೋರಿಕೆಯಾಗಿ ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ನಿಂಗರಾಜು, ಪತ್ನಿ ಜ್ಯೋತಿ, ಪಕ್ಕದ ಮನೆಯ ನಿವಾಸಿ ರಾಣಿ, ಶೀಲ, ನಾಗಮ್ಮ ಎಂಬುವವರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಕೂಡಲೇ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ದಂಪತಿಗೆ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಜೋರಾದ ಶಬ್ದ ಕೇಳಿದ ಪಕ್ಕದ ಮನೆಯವರಾದ ರಾಣಿ, ಶೀಲ, ನಾಗಮ್ಮರವರು ನೋಡಲು ಹೋಗುತ್ತಿದ್ದಂತೆ ಅವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದ್ದು ಈ ಅನಾಹುತ ಸಂಭವಿಸಿದೆ ಎನ್ನಲಾಗ್ತಿದೆ.
ಸದ್ಯ ಈ ಸಂಬಂಧ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.