ಮಧುಗಿರಿ :
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆಯಾಗಿದ್ದು, ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ. ಮೀರಚಿನ್ನೇನಹಳ್ಳಿ ಗ್ರಾಮದ ರಾಜಣ್ಣ ಅಲಿಯಾಸ್ ಪಾಣಿ ಕೊಲೆಯಾದ ಕಾಂಗ್ರೆಸ್ ಮುಖಂಡನಾಗಿದ್ದಾನೆ, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಸ್ನೇಹಿತರ ಜೊತೆ ಹೊರ ಬಂದಿದ್ದ ರಾಜಣ್ಣ ಬೆಳಗ್ಗೆ ಪಕ್ಕದ ಮನೆ ಈರಮ್ಮ ಎಂಬುವವರ ಮನೆ ಮುಂದೆ ಹೆಣವಾಗಿ ಪತ್ತೆಯಾಗಿದ್ದಾನೆ.
ರಾಜಣ್ಣ ಮೀರಚಿನ್ನೇನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡನಾಗಿದ್ದ, ಜೊತೆಗೆ ಟ್ರ್ಯಾಕ್ಟರ್ ಮಾಲೀಕರಾಗಿದ್ದು ಕೃಷಿಕರು ಕೂಡ ಆಗಿದ್ದಾರೆ. ಆದರೆ ಹೀಗೆ ಏಕಾಏಕಿ ಕೊಲೆಯಾಗಿರೋದು ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ರಾಜಣ್ಣನ ಕೈ ಕಾಲು ಕಟ್ಟಿ ಹಾಕಿ, ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಕೋಳಿ ಕುಯ್ಯುವ ಚಾಕುವಿನಿಂದ ದುಷ್ಕರ್ಮಿಗಳು ಬರ್ಬರವಾಗಿ ಇರಿದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ರಾಜಣ್ಣ ಸಾವನ್ನಪ್ಪಿದ್ದ. ರಾತ್ರಿ ಕೊಲೆಯಾಗಿದ್ದು, ಬೆಳಗ್ಗೆ ಕಾಂಗ್ರೆಸ್ ಮುಖಂಡ ರಾಜಣ್ಣ ಶವ ಪಕ್ಕದ ಮನೆ ಈರಮ್ಮ ಮನೆ ಮುಂದೆ ಪತ್ತೆಯಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮೃತ ರಾಜಣ್ಣಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಪತ್ನಿ ಇದ್ದು ಮನೆಗೆ ಆಧಾರ ವಾಗಿದ್ದವರನ್ನು ಕಳೆದುಕೊಂಡ ಗೋಳಾಟ ಹೇಳ ತೀರದಾಗಿದೆ.
ಮೇಲ್ನೋಟಕ್ಕೆ ಅನೈತಿಕ ಸಂಬಂಧ ಶಂಕೆಯಿಂದ ಕಾಂಗ್ರೆಸ್ ಮುಖಂಡ ರಾಜಣ್ಣನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಯಾರೊಂದಿಗೂ ದ್ವೇಷ ಇರಲಿಲ್ಲ, ಆದರೆ ಸ್ನೇಹಿತರ ಜೊತೆ ರಾತ್ರಿ ಪಾರ್ಟಿ ಮಾಡಿ ಮಾಡಿದ್ದಾರೆ. ಬಳಿಕ ಕುಡಿತದ ಅಮಲಿನಲ್ಲಿ ಸ್ನೇಹಿತರೇ ಕೈ-ಕಾಲು ಕಟ್ಟಿ ಹಾಕಿ ಎದೆ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ ಎಂದು ಮೃತ ಕಾಂಗ್ರೆಸ್ ಮುಖಂಡ ರಾಜಣ್ಣ ಸಹೋದರ ಆರೋಪ ಮಾಡ್ತಿದ್ದಾರೆ.
ಇನ್ನು ನಮಗೆ ಯಾರ ಮೇಲೂ ಕೂಡ ಅನುಮಾನ ಇಲ್ಲ. ಎಲ್ಲರೊಂದಿಗೆ ರಾಜಣ್ಣ ಚೆನ್ನಾಗಿಯೇ ಇದ್ದರು, ಆದರೆ ರಾತ್ರೋ ರಾತ್ರಿ ಹೀಗೆ ಕೊಲೆ ಮಾಡಿದ್ದಾರೆ ಎಂದು ಮೃತ ರಾಜಣ್ಣ ಸಂಬಂಧಿಕರು ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಗೋಪಾಲ್, ಮಧುಗಿರಿ ಸಿಪಿಐ ಹನುಮಂತರಾಯಪ್ಪ, ಪಿಎಸ್ಐ ಮೊಹಮ್ಮದ್ ಪೈಗಂಬರ್ ಹಾಗೂ ಎಫ್.ಎಸ್.ಎಲ್ ತಂಡ, ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಕೊಲೆಗೆ ಬಳಸಿದ್ದ ಚೂರಿಯನ್ನು ಮಿಡಿಗೇಶಿ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದು, ಕೊಲೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕೊಲೆ ಆರೋಪಿಗಳ ಬಂಧನದ ಬಳಿಕ ಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.