ತುಮಕೂರು :
ತುಮಕೂರು ಗ್ರಾಮಾಂತರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಜನರಲ್ಲಿ ದಿನೇ ದಿನೇ ಆತಂಕ ಹೆಚ್ಚಾಗ್ತಾನೆ ಇದೆ. ಇತ್ತ ನಾಗವಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಚಿರತೆ ಕಾಟ ಶುರುವಾಗಿದ್ದು, ಮನೆಯಿಂದ ಜನರು ಹೊರಬರಲು ಭಯ ಪಡುವಂತಾಗಿದೆ.
ನಿನ್ನೆ ರಾತ್ರಿ ನಾಗವಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಸಂದ್ರ ಗ್ರಾಮದ ವಿರುಪಾಕ್ಷಪ್ಪ ಎಂಬುವವರ ತೋಟದ ಮನೆ ಬಳಿ ಚಿರತೆ ಕಂಡು ಬಂದಿದ್ದು, ಚಿರತೆ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ಓಡಾಟ ಕಂಡು ಮನೆಯವರು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಇನ್ನು ರಾತ್ರಿ ವೇಳೆ ತೋಟಕ್ಕೆ ನೀರು ಹಾಯಿಸಲು ಹೋಗಲು ರೈತರು ಭಯಪಡ್ತಾ ಇದ್ದು, ಕೂಡಲೇ ಚಿರತೆ ಸೆರೆಗೆ ಬೋನುಗಳನ್ನು ಇರಿಸುವಂತೆ ಒತ್ತಾಯ ಮಾಡಿದ್ದಾರೆ.
ಇನ್ನು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಇದೇ ಗ್ರಾಮದಲ್ಲಿ ಚಿರತೆಯೊಂದು ಮೇಕೆಯನ್ನು ಎಳೆದೊಯ್ದು ಭಕ್ಷಿಸಿತ್ತು. ಇದರಿಂದ ಭಯಭೀತರಾಗಿದ್ದ ರೈತರು ಚಿರತೆಯನ್ನು ಸೆರೆ ಹಿಡಿಯುವಂತೆ ಮನವಿ ಮಾಡಿದರೂ, ಯಾವುದೇ ಪ್ರಯೋಜನ ಆಗಿಲ್ಲ. ತುಮಕೂರು ಗ್ರಾಮಾಂತರ ಭಾಗದ ಬೆಳ್ಳಾವಿ, ಊರ್ಡಿಗೆರೆಯಲ್ಲಿ ಬೋನುಗಳನ್ನು ಇರಿಸಲಾಗಿದೆ. ಅಲ್ಲಿ ಬೋನಿಗೆ ಚಿರತೆ ಬಿದ್ದ ಬಳಿಕ ತಂದು ಇಲ್ಲಿ ಬೋನು ಇರಿಸುತ್ತೇವೆ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು ಉಡಾಫೆಯಾಗಿ ಉತ್ತರಿಸ್ತಾ ಇದ್ದಾರೆ ಅಂತಾ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ನಾಗವಲ್ಲಿ ವ್ಯಾಪ್ತಿಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಬೋನುಗಳನ್ನು ಇರಿಸಿ, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸುದ್ದಾರೆ.