ಮಧುಗಿರಿ :
ಇತ್ತೀಚಿನ ದಿನಗಳಲ್ಲಿ ಮಧುಗಿರಿಯಲ್ಲಿ ಕೊಲೆಗಳಂತಹ ಘಟನೆಗಳು ನಡೆಯುತ್ತಿದ್ದು, ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡ್ತಿದೆ. ಈಗ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಹೊರವಲಯದಲ್ಲಿ ತೋಟಕ್ಕೆ ಹೋದ ರೈತ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ನಡುಕ ಉಂಟಾಗಿದೆ. ಹಾಡುಹಗಲೇ ಕೊಲೆಯಾದ್ರೆ ಹೇಗಪ್ಪಾ.. ನಾವು ಓಡಾಡೋದೆ ಹೇಗಪ್ಪಾ ಎಂಬ ಆತಂಕದಲ್ಲಿ ಜನರಿದ್ದಾರೆ.
ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಹೊರವಲಯದ ತೋಟಕ್ಕೆಂದು ಬೆಳಗ್ಗೆ ರೈತ ಲಿಂಗಪ್ಪ ಎಂಬುವವರು ತೆರಳಿದ್ದು, ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗ್ಗೆ ತೋಟಕ್ಕೆ ಹೋದ ರೈತ ಲಿಂಗಪ್ಪ ಎಷ್ಟು ಹೊತ್ತು ಕಳೆದ್ರು ಮನೆಗೆ ಬಾರದಿದದ್ದಕ್ಕೆ ಮಗಳು ಪುಟ್ಟಲಿಂಗಮ್ಮ ಮಧ್ಯಾಹ್ನ ಊಟ ತೆಗೆದುಕೊಂಡು ತೋಟಕ್ಕೆ ಬಂದಾಗ, ತಮ್ಮ ತಂದೆ ಶವವಾಗಿ ಪತ್ತೆಯಾಗಿರೋದನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಮಗಳ ಚೀರಾಟ ಕಂಡ ಅಕ್ಕಪಕ್ಕದ ಜಮೀನಿನವರು ಹಾಗೂ ಗ್ರಾಮಸ್ಥರು ತೋಟಕ್ಕೆ ಜಮಾಯಿಸಿದ್ರು. ಹೆತ್ತ ಅಪ್ಪನನ್ನು ಶವವಾಗಿ ಕಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು.
ಇನ್ನು ಹಳೆ ದ್ವೇಷಕ್ಕೆ ತಮ್ಮ ತಂದೆ ಲಿಂಗಪ್ಪನನ್ನು ಕೊಲೆಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡ್ತಾ ಇದ್ದಾರೆ. ತಮ್ಮ ಜಮೀನಿಗೆ ಮೇಕೆ ಮೇಯಲು ಬಿಡ್ತಾರೆ ಎಂಬ ಕಾರಣಕ್ಕೆ ಶನಿವಾರಪ್ಪ ಹಾಗೂ ಮಹದೇವಪ್ಪ ಎಂಬುವವರ ಜೊತೆ ಮೃತ ಲಿಂಗಪ್ಪ ಒಂದು ತಿಂಗಳ ಹಿಂದೆ ಗಲಾಟೆ ಮಾಡಿಕೊಂಡಿದ್ರು. ಇದೇ ವಿಚಾರಕ್ಕೆ ಬೆಳಗ್ಗೆ ತೋಟಕ್ಕೆ ಬಂದಿದ್ದ ಲಿಂಗಪ್ಪ ಅವರನ್ನು ಶನಿವಾರಪ್ಪ ಹಾಗೂ ಮಹದೇವಪ್ಪ ಇಬ್ಬರು ಅಟ್ಟಾಡಿಸಿಕೊಂಡು ಕೊಂದಿದ್ದಾರೆ ಎಂದು ಮಕ್ಕಳು ಆರೋಪ ಮಾಡುತ್ತಿದ್ದಾರೆ.
ರೈತನ ಶವ ಪತ್ತೆಯಾಗ್ತಿದ್ದಂತೆ ಸ್ಥಳಕ್ಕೆ ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್, ಪಿಎಸ್ಐ ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಜಮಾಯಿಸಿ ಪರಿಶೀಲನೆ ನಡೆಸಿದ್ರು. ರೈತ ಲಿಂಗಪ್ಪಗೆ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಶಂಕೆ ವ್ಯಕ್ತಪಡಿಸ್ತಾ ಇದ್ದಾರೆ. ಆದ್ರೆ ರೈತ ಲಿಂಗಪ್ಪನ ಶವ ಪತ್ತೆಯಾದ ಸ್ಥಳ ಹಾಗೂ ಕರೆಂಟ್ ಕಂಬ ಇರುವ ಜಾಗಕ್ಕೆ ಸಾಕಷ್ಟು ದೂರ ಇದ್ರು ಕೂಡ ಹೇಗೆ ಸಾವನ್ನಪ್ಪಿದ್ರು ಅನ್ನೋ ಅನುಮಾನ ಮೂಡಿದೆ. ರೈತ ಲಿಂಗಪ್ಪ ಸಾವು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಡ್ತಾ ಇದ್ದು ಪೊಲೀಸರ ತನಿಖೆ ಬಳಿಕವಷ್ಟೇ ಕೊಲೆಯ ಅಸಲಿ ಸತ್ಯ ಹೊರಬೀಳಲಿದೆ.