ತಿಪಟೂರು :
ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುತ್ತಿವೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಮಾತುಗಳ ನಡುವೆ ಸರ್ಕಾರ ಸರ್ಕಾರಿ ಶಾಲೆಗಳು ಮುಚ್ಚಬಾರದು ಅಂತ ವಿಶೇಷ ಯೋಜನೆಗಳನ್ನೇನೋ ಜಾರಿಗೆ ತರುತ್ತಿದ್ದಾರೆ. ಆದರೆ ಅವುಗಳಿಂದ ಏನೇನು ಉಪಯೋಗವಾಗುತ್ತಿಲ್ಲ. ಸರ್ಕಾರಿ ಶಾಲೆಗಳು ಸರಿಯಾದ ನಿರ್ವಹಣೆಯಿಲ್ಲದೆ ಇಂದು ಕುಡುಕರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಯ ತಾಣವಾಗಿ ಬದಲಾಗ್ತಿವೆ. ಇದಕ್ಕೆ ಸಾಕ್ಷಿ ಎಂಬಂತಿದೆ ತಿಪಟೂರಿನಲ್ಲಿರುವ ಸರ್ಕಾರಿ ಉರ್ದು ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ.
ತಿಪಟೂರಿನಲ್ಲಿ ಸ್ವಾತಂತ್ರ್ಯಕ್ಕಿಂತಲೂ ಹಿಂದೆ ಸ್ಥಾಪಿಸಿದ್ದ ಈ ಸರ್ಕಾರಿ ಉರ್ದು ಶಾಲೆಗೆ ಸರಿ ಸುಮಾರು 112 ವರ್ಷ ಇತಿಹಾಸವಿದೆ. ಆದರೆ ಈ ಶಾಲೆ ಇಂದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗುತ್ತಿದೆ. ಗಾಂಧಿನಗರದಲ್ಲಿರುವ ಉರ್ದು ಪ್ರಾಥಮಿಕ ಪಾಠಶಾಲೆಯಲ್ಲಿ ಸುಮಾರು 100 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ತಾನೇ ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಕೂಡ ಘೋಷಿಸಲಾಗಿತ್ತು. ಆದರೆ ಈ ನಡುವೆ ಕುಡುಕರು ಶಾಲೆಯ ಆವರಣವನ್ನು ತಮ್ಮ ಅಡ್ಡೆಯಾಗಿ ಮಾಡಿಕೊಂಡು ಮೋಜು ಮಸ್ತಿ ಮಾಡ್ತಿದ್ದಾರೆ. ಎಲ್ಲೆಂದರಲ್ಲಿ ಕುಡಿದು ಬಾಟಲಿಗಳು, ಬೀಡಿ ಸಿಗರೇಟ್‌ಗಳನ್ನು ಎಸೆದಿದ್ದಾರೆ.
ಈ ಶಾಲೆಯ ಪಕ್ಕದಲ್ಲಿಯೇ ರೈಲ್ವೆ ಸ್ಟೇಷನ್ ಕೂಡ ಇದೆ. ರೈಲ್ವೆ ಅಧಿಕಾರಿಗಳು ಸಾರ್ವಜನಿಕರಿಗಾಗಿ ಅಂಡರ್ ಪಾಸನ್ನು ನಿರ್ಮಿಸಿದ್ದಾರೆ. ಸೆಪ್ಟಿಗೆಂದು ಗೋಡೆಯನ್ನು ಕೂಡ ನಿರ್ಮಿಸಿ ಪೆನ್ಸಿಲಿಂಗ್ ಮಾಡಿದ್ದಾರೆ. ಆದರೆ ಒಂದು ಬದಿಯ ಗೋಡೆಗೆ ಮಾತ್ರ ಪೆನ್ಸಿಲಿಂಗ್ ಮಾಡಿ ಮತ್ತೊಂದು ಬದಿಯ ಗೋಡೆಯನ್ನು ಹಾಗೇಯೇ ಬಿಟ್ಟಿದ್ದಾರೆ. ಇದು ಶಾಲೆಯಲ್ಲಿ ಓದುವ ಮಕ್ಕಳ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಯಾಕೆಂದರೆ ಈ ಸರ್ಕಾರಿ ಉರ್ದು ಶಾಲೆಗೆ ಕಾಂಪೌಂಡ್ ಇಲ್ಲ, ಹೀಗಾಗಿ ಮೈದಾನದಲ್ಲಿ ಆಟವಾಡಲು ಹೋಗುವ ಮಕ್ಕಳು ಆಯತಪ್ಪಿ ರೈಲ್ವೆ ಇಲಾಖೆ ನಿರ್ಮಿಸಿರುವ ಅಂಡರ್‌ಪಾಸ್ ಸ್ಥಳಕ್ಕೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇನ್ನು ಈ ಅವ್ಯವಸ್ಥೆಯ ಬಗ್ಗೆ ಸ್ಥಳೀಯರು ಎಷ್ಟೇ ಬಾರಿ ಡಿಡಿಪಿಓಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೆ ಅನ್ನುತ್ತಿಲ್ಲವಂತೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ 100 ವರ್ಷ ಇತಿಹಾಸವಿರುವ ಈ ಸರ್ಕಾರಿ ಶಾಲೆಯನ್ನು ಉಳಿಸಬೇಕಾಗಿದೆ.