Neet ಮರು ಪರೀಕ್ಷೆಗೆ ಹಾಜರಾಗಲು ಜೈಲು ಸೇರಿದ್ದ ಯುವಕನಿಗೆ ನ್ಯಾಯಾಲಯ ತಾತ್ಕಾಲಿಕ ಜಾಮೀನು ನೀಡಿದೆ.

Neet ಪರೀಕ್ಷೆಗಾಗಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ 18 ವರ್ಷದ ಯುವಕನಿಗೆ ಮರು ಪರೀಕ್ಷೆ ಬರೆಯಲು ಮುಂಬೈನ ವಿಶೇಷ ಪೋಕ್ಸೋ ನ್ಯಾಯಾಲಯ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ನೀಡಿದೆ.
ಜೂನ್ 21ರಂದು ನಡೆಯಲಿರುವ ನೀಟ್ ಯುಜಿ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ವಿಶೇಷ ನ್ಯಾಯಾಧೀಶ ಎಸ್.ಆರ್. ಶರ್ಮಾ ಅವರ ಪೀಠ, ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ವಕೀಲ ಕಪಿಲ್ ವಿಶ್ವಾಸ್ ಜೋಡ್ಜ್ ವಾದ ಮಂಡಿಸಿ, ಜೈಲಿನಲ್ಲಿರುವ ವ್ಯಕ್ತಿಗಳ ಪುನರ್ವಸತಿಯೂ ನ್ಯಾಯ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : Tumkur ನಲ್ಲಿ ಅನಧಿಕೃತ ಆಶ್ರಮದ ಮೇಲೆ ದಾಳಿ, 64 ಜನರ ರಕ್ಷಣೆ
ಇನ್ನೊಂದೆಡೆ, ಆರೋಪದ ಸ್ವರೂಪ ಗಂಭೀರವಾಗಿರುವುದರಿಂದ ಜಾಮೀನು ನೀಡಬಾರದು ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು. ಆದರೆ ಪ್ರಕರಣದ ಸಂತ್ರಸ್ತೆ ಹಾಗೂ ಆಕೆಯ ಕುಟುಂಬ ಜಾಮೀನಿಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ಹಿನ್ನೆಲೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ಜಾಮೀನು ಅವಧಿಯಲ್ಲಿ ಸಂತ್ರಸ್ತೆಯನ್ನು ಸಂಪರ್ಕಿಸಬಾರದು, ಸಾಕ್ಷ್ಯ ನಾಶ ಮಾಡಬಾರದು, ಯಾರಿಗೂ ಬೆದರಿಕೆ ಹಾಕಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಜೊತೆಗೆ ₹50 ಸಾವಿರ ಮೌಲ್ಯದ ಬಾಂಡ್ ಹಾಗೂ ಅದೇ ಮೊತ್ತದ ಶೂರಿಟಿ ನೀಡುವಂತೆ ಸೂಚಿಸಿದೆ.
ಪರೀಕ್ಷೆ ಮುಗಿದ ನಂತರ ಜೂನ್ 22ರಂದು ಮಧ್ಯಾಹ್ನ 2 ಗಂಟೆಯೊಳಗೆ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ಪರೀಕ್ಷೆಗೆ ಹಾಜರಾದ ಬಗ್ಗೆ ದಾಖಲೆ ಸಲ್ಲಿಸುವಂತೆ ಕೂಡ ಸೂಚನೆ ನೀಡಲಾಗಿದೆ.
ಒಟ್ಟಾರೆ, ಗಂಭೀರ ಆರೋಪದ ನಡುವೆಯೂ ಶಿಕ್ಷಣದ ಹಕ್ಕು ಮತ್ತು ಭವಿಷ್ಯದ ಅವಕಾಶಗಳನ್ನು ಪರಿಗಣಿಸಿ ನ್ಯಾಯಾಲಯ ನೀಡಿರುವ ಈ ಆದೇಶ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
MUST WATCH : JUNE.21ರಂದು ಮತ್ತೆ NEET EXAM – ತುಮಕೂರಿನಲ್ಲಿ ಹೇಗಿರುತ್ತೆ ಭದ್ರತೆ?




