KSET-2026 ಪರೀಕ್ಷೆಗೆ ಅಧಿಸೂಚನೆ ಪ್ರಕಟ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳು, ಪ್ರಥಮ ದರ್ಜೆ ಪದವಿ ಕಾಲೇಜುಗಳು ಹಾಗೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2026 (KSET-2026)ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ರಾಜ್ಯಾದ್ಯಂತ 2026ರ ಅಕ್ಟೋಬರ್ 11ರಂದು (ಭಾನುವಾರ) ಪರೀಕ್ಷೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಪ್ರಾರಂಭ: ಆಗಸ್ಟ್ 10, 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ 5, 2026
- ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: ಸೆಪ್ಟೆಂಬರ್ 6, 2026
- ಹಾಲ್ ಟಿಕೆಟ್ ಬಿಡುಗಡೆ: ಅಕ್ಟೋಬರ್ 1, 2026
- ಪರೀಕ್ಷೆ: ಅಕ್ಟೋಬರ್ 11, 2026
- ಪರೀಕ್ಷಾ ಸಮಯ: ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
ಶೈಕ್ಷಣಿಕ ಅರ್ಹತೆ
ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ (ಪ್ರವರ್ಗ-1, IIA, IIB, IIIA, IIIB), ತೃತೀಯ ಲಿಂಗಿ ಹಾಗೂ ವಿಶೇಷ ಚೇತನ (PwD) ಅಭ್ಯರ್ಥಿಗಳಿಗೆ ಕನಿಷ್ಠ ಶೇ.50 ಅಂಕ ನಿಗದಿಪಡಿಸಲಾಗಿದೆ.
ಸ್ನಾತಕೋತ್ತರ ಪದವಿಯ ಅಂತಿಮ ವರ್ಷ ಅಥವಾ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : ರೈಲ್ವೆಯಲ್ಲಿ 734 ಅಪ್ರೆಂಟಿಸ್ ಹುದ್ದೆಗಳ ಬಂಪರ್ ನೇಮಕಾತಿ

KSET-2026 ಪರೀಕ್ಷೆಗೆ ಗರಿಷ್ಠ ವಯೋಮಿತಿ ಇರುವುದಿಲ್ಲ.
ಪರೀಕ್ಷಾ ಶುಲ್ಕ
| ಅಭ್ಯರ್ಥಿಗಳ ವರ್ಗ | ಶುಲ್ಕ |
|---|---|
| ಸಾಮಾನ್ಯ, II-A, II-B, III-A, III-B ಹಾಗೂ ಹೊರರಾಜ್ಯದ ಅಭ್ಯರ್ಥಿಗಳು | ₹750 |
| ಪ್ರವರ್ಗ-I, SC-A, SC-B, SC-C, ST, PwD ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು | ₹500 |
ಪರೀಕ್ಷಾ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.
37 ವಿಷಯಗಳಲ್ಲಿ ಪರೀಕ್ಷೆ
KSET-2026 ಪರೀಕ್ಷೆಯನ್ನು ಒಟ್ಟು 37 ವಿಷಯಗಳಲ್ಲಿ ಆಫ್ಲೈನ್ OMR ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯು ಒಂದೇ ಅವಧಿಯಲ್ಲಿ ಒಟ್ಟು 3 ಗಂಟೆಗಳ ಕಾಲ ನಡೆಯಲಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಪತ್ರಿಕೆ-1: ಬೋಧನೆ, ಸಂಶೋಧನೆ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ 50 ಬಹು ಆಯ್ಕೆ ಪ್ರಶ್ನೆಗಳು, ಒಟ್ಟು 100 ಅಂಕಗಳು.
ಪತ್ರಿಕೆ-2: ಅಭ್ಯರ್ಥಿ ಆಯ್ಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದ 100 ಬಹು ಆಯ್ಕೆ ಪ್ರಶ್ನೆಗಳು, ಒಟ್ಟು 200 ಅಂಕಗಳು.
ಒಟ್ಟು ಪರೀಕ್ಷೆಯು 150 ಪ್ರಶ್ನೆಗಳು ಹಾಗೂ 300 ಅಂಕಗಳಿಗೆ ನಡೆಯಲಿದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ.

ಆನ್ಲೈನ್ ಮೂಲಕ ಅರ್ಜಿ
ಅರ್ಹ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್ಸೈಟ್ KEA ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅಂಚೆ ಅಥವಾ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. 18 ಪ್ರಮುಖ ವಿಷಯಗಳಿಗೆ ರಾಜ್ಯದ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಉಳಿದ 19 ವಿಷಯಗಳಿಗೆ ಬೆಂಗಳೂರು ಮಾತ್ರ ಪರೀಕ್ಷಾ ಕೇಂದ್ರವಾಗಿರಲಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಕೆಇಎ ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ವಿಷಯವಾರು ವಿವರಗಳು, ಪರೀಕ್ಷಾ ಕೇಂದ್ರಗಳು ಹಾಗೂ ಇತರೆ ನಿಯಮಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು ಸೂಕ್ತ.
ಇದನ್ನು ನೋಡಿ : ARSIKEREಯಲ್ಲಿ SHIVALINGEGOWDAರ ಹವಾ – ಹೂಮಳೆ ಪಟಾಕಿ ಸಿಡಿಸಿ ಅದ್ದೂರಿ ವೆಲ್ಕಮ್





