Mysuru : ಚಾಮುಂಡಿಬೆಟ್ಟಕ್ಕೆ ಹೊಸ ರೂಲ್ಸ್! ಏನದು?

ಮೈಸೂರಿನ (Mysuru) ಚಾಮುಂಡಿಬೆಟ್ಟದಲ್ಲಿ ಜುಲೈ 17ರಿಂದ ಆಗಸ್ಟ್ 7ರವರೆಗೆ ನಡೆಯಲಿರುವ ಆಷಾಢ ಮಾಸದ ವಿಶೇಷ ಪೂಜೆಗಳಿಗೆ ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧ
ಸಿದ್ಧತಾ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಆಷಾಢ ಮಾಸದ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ನಿಯಮ ಚಾಮುಂಡೇಶ್ವರಿ ವರ್ಧಂತಿ ದಿನವೂ ಜಾರಿಯಲ್ಲಿರಲಿದೆ.

₹300 ಟಿಕೆಟ್ ರದ್ದು, ₹2,000ಕ್ಕೆ ನೇರ ದರ್ಶನ
ಈ ಬಾರಿ ₹300 ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆಯನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಅದರ ಬದಲಿಗೆ ₹2,000 ಮುಖಬೆಲೆಯ ವಿಶೇಷ ದರ್ಶನ ಟಿಕೆಟ್ ಮಾತ್ರ ಲಭ್ಯವಿದ್ದು, ಈ ಟಿಕೆಟ್ ಪಡೆದ ಭಕ್ತರು ಸರತಿ ಸಾಲಿಲ್ಲದೆ ನೇರವಾಗಿ ದೇವಿಯ ದರ್ಶನ ಪಡೆಯಬಹುದಾಗಿದೆ.
ವಿಶೇಷ ಟಿಕೆಟ್ ಪಡೆದವರಿಗೆ ಚಾಮುಂಡೇಶ್ವರಿ ದೇವಿಯ ಪೊಟೋ, ಲಾಡು ಪ್ರಸಾದ ಹಾಗೂ ವಿಶೇಷ ಕಿಟ್ ಕೂಡ ನೀಡಲಾಗುತ್ತದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.
ಇದನ್ನು ಓದಿ : ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್

ಗಣ್ಯರಿಗೆ ಮಾತ್ರ ವಿಶೇಷ ಪ್ರವೇಶ – Mysuru
ವಿಐಪಿ ಹಾಗೂ ವಿವಿಐಪಿ ದರ್ಶನಕ್ಕೆ ಬೆಳಗ್ಗೆ 5.30ರಿಂದ 9.30ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶಿಷ್ಟಾಚಾರದ ವ್ಯಾಪ್ತಿಗೆ ಬರುವ ಗಣ್ಯರಿಗೆ ಮಾತ್ರ ವಿಶೇಷ ಪ್ರವೇಶ ದೊರೆಯಲಿದ್ದು, ಯಾವುದೇ ಶಿಫಾರಸು ಪತ್ರಗಳನ್ನು ಪರಿಗಣಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿಐಪಿ ವಾಹನಗಳನ್ನು ಮಹಿಷಾಸುರ ಪ್ರತಿಮೆ ವೃತ್ತದ ಬಳಿ ನಿಲುಗಡೆ ಮಾಡಲಾಗುತ್ತದೆ. ಮೆಟ್ಟಿಲುಗಳ ಮೂಲಕ ಬೆಟ್ಟ ಏರುವ ಭಕ್ತರಿಗೆ ಹಾಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಲಲಿತ ಮಹಲ್ ಅರಮನೆ ಮೈದಾನದಿಂದ ಭಕ್ತರಿಗಾಗಿ ಉಚಿತ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇದನ್ನು ನೋಡಿ : ತುಮಕೂರಿನ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟ ಕೇಂದ್ರ ರೈಲ್ವೆ ಸಚಿವ ಸೋಮಣ್ಣ



