Bengaluru : ಸಾರಿಗೆ ನೌಕರರಿಗೆ ಗುಡ್ ನ್ಯೂಸ್! ಮೂಲ ವೇತನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

Bengaluru : ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕೊನೆಗೂ ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಹಾಗೂ ಕೆಕೆಆರ್ಟಿಸಿ ಸಿಬ್ಬಂದಿಯ ಮೂಲ ವೇತನವನ್ನು ಶೇಕಡಾ 12.5ರಷ್ಟು ಹೆಚ್ಚಿಸಲಾಗಿದೆ.
1.05 ಲಕ್ಷ ನೌಕರರಿಗೆ ಪ್ರಯೋಜನ
ಸರ್ಕಾರದ ಆದೇಶದಂತೆ 2025ರ ಮಾರ್ಚ್ 31ರ ಮೂಲ ವೇತನವನ್ನು ಆಧಾರವಾಗಿಟ್ಟುಕೊಂಡು ವೇತನ ಪರಿಷ್ಕರಣೆ ಮಾಡಲಾಗಿದ್ದು, 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ನೌಕರರಿಗೆ ನೇರ ಲಾಭವಾಗಲಿದೆ.
ಇದನ್ನು ಓದಿ : KSRTC : ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು..!!

ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆ
ವೇತನ ಹೆಚ್ಚಳದಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 72 ಕೋಟಿ 80 ಲಕ್ಷ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಚಾಲಕರು, ನಿರ್ವಾಹಕರು ಹಾಗೂ ಆಡಳಿತ ಸಿಬ್ಬಂದಿ ಸೇರಿದಂತೆ ಎಲ್ಲಾ ವಿಭಾಗದ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ.
ಹಿಂಬಾಕಿ ಹಣದ ಮೊದಲ ಕಂತು ಬಿಡುಗಡೆ
ಈಗಾಗಲೇ ಪಾವತಿಸಬೇಕಿದ್ದ ವೇತನ ಹಿಂಬಾಕಿಯ ಮೊದಲ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಮೊತ್ತವನ್ನು ಮುಂದಿನ ತಿಂಗಳುಗಳಲ್ಲಿ ಹಂತ ಹಂತವಾಗಿ ಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಜುಲೈ ತಿಂಗಳ ವೇತನದಲ್ಲೇ ಪರಿಷ್ಕೃತ ವೇತನ ಜಮೆಯಾಗಲಿದ್ದು, ಈ ತಿಂಗಳಿಂದಲೇ ನೌಕರರು ಹೆಚ್ಚಿದ ಸಂಬಳವನ್ನು ಪಡೆಯಲಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ವೇತನ ಹೆಚ್ಚಳಕ್ಕಾಗಿ ಸಾರಿಗೆ ನೌಕರರು ಹಾಗೂ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಮುಷ್ಕರದ ಎಚ್ಚರಿಕೆಯನ್ನೂ ನೀಡಿದ್ದವು. ಅಂತಿಮವಾಗಿ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ಐತಿಹಾಸಿಕ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ.

ಇದನ್ನು ನೋಡಿ : ಮಾಲೀಕರಿಗೆ ಬರೀ ದುಡ್ಡೇ ಮುಖ್ಯ ಕ್ವಾರಿ ದುರಂತಕ್ಕೆ ಹೆಚ್ಡಿಕೆ ಆಕ್ರೋಶ




