
ವಿಧಾನ ಪರಿಷತ್ ಮಹಾಸಮರ – ಕಾಂಗ್ರೆಸ್ಗೆ ಪ್ರತಿಷ್ಠೆ.. NDAಗೆ ಸವಾಲು.!
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಪ್ರತಿಷ್ಠೆಯ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆ, ಅಂದರೆ ಅಕ್ಟೋಬರ್ 23ರಂದು, ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಲ್ಲಿ ನಡೆಯಲಿರುವ ಈ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.
ನಾಲ್ಕು ಸ್ಥಾನಗಳ ಪೈಕಿ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರ
ಇನ್ನು ಹೈವೋಲ್ಟೇಜ್ ಕ್ಷೇತ್ರವಾದ ಆಗ್ನೇಯ ಪದವೀಧರ ಕ್ಷೇತ್ರ. ಇಲ್ಲಿ ಕಾಂಗ್ರೆಸ್ನಿಂದ ಶಶಿ ಹುಲಿಕುಂಟೆ ಕಣದಲ್ಲಿದ್ದರೆ, ಎನ್ಡಿಎ ಅಭ್ಯರ್ಥಿಯಾಗಿ ಕೆ.ಎಂ. ಸುರೇಶ್ ಸ್ಪರ್ಧಿಸಿದ್ದಾರೆ. ಇಬ್ಬರ ನಡುವಿನ ಪೈಪೋಟಿ ಇದೀಗ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಎನ್ಡಿಎ ಅಭ್ಯರ್ಥಿ ಪರ ಮೈತ್ರಿ ನಾಯಕರು ಭರ್ಜರಿ ಪ್ರಚಾರ ಮಾಡಿದ್ದಾರೆ, ಹೀಗಾಗಿ ಪದವೀಧರ ಮತದಾರರು ಯಾರ ಪರ ಒಲವು ತೋರಿಸುತ್ತಾರೆ ಅನ್ನೋದು ಫಲಿತಾಂಶದಲ್ಲಿ ನಿರ್ಣಾಯಕವಾಗಲಿದೆ.
READ THIS : ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ – ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

ಪಶ್ಚಿಮ ಪದವೀಧರ ಕ್ಷೇತ್ರದಲ್ಲೂ ಪೈಪೋಟಿ
ಮತ್ತೊಂದೆಡೆ ಸಿಎಂ ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರಿನ ಶಿಕ್ಷಕರ ಕ್ಷೇತ್ರ, ಕಾಂಗ್ರೆಸ್ನ ಹಾಲಿ ಸದಸ್ಯ ಪುಟ್ಟಣ್ಣ ಅವರಿಗೆ ಎದುರಾಳಿಯಾಗಿ ಜೆಡಿಎಸ್ನ ಎ.ಪಿ. ರಂಗನಾಥ್ ಕಣಕ್ಕಿಳಿದಿದ್ದಾರೆ. ಇನ್ನು ಪಶ್ಚಿಮ ಪದವೀಧರ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇದೆ. ಬಿಜೆಪಿಯ ಹಾಲಿ ಸದಸ್ಯ ಎಸ್.ವಿ. ಸಂಕನೂರು ಮತ್ತೊಮ್ಮೆ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸುವ ಗುರಿ ಹೊಂದಿದ್ದರೆ, ಕಾಂಗ್ರೆಸ್ನಿಂದ ಮೋಹನ್ ಲಿಂಬಿಕಾಯಿ ಕಣದಲ್ಲಿದ್ದಾರೆ. ಇಲ್ಲಿ ಬಿಜೆಪಿ ತನ್ನ ಹಿಂದಿನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತಾ ಅಥವಾ ಕಾಂಗ್ರೆಸ್ ಹೊಸ ಲೆಕ್ಕಾಚಾರದಲ್ಲಿ ಗೆಲುವಿನ ದಾರಿ ಕಂಡುಕೊಳ್ಳುತ್ತಾ ಅನ್ನೋ ಕುತೂಹಲ ಹೆಚ್ಚಾಗಿದೆ.
ಕಾಂಗ್ರೆಸ್ ಮತ್ತು NDA ನಡುವೆ ನೇರ ಹಣಾಹಣಿ
ಇತ್ತ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲೂ ಕಾಂಗ್ರೆಸ್ ಮತ್ತು NDA ನಡುವೆ ನೇರ ಹಣಾಹಣಿ ಇದೆ. ಬಿಜೆಪಿಯಿಂದ ಶಶಿಲ್ ನಮೋಶಿ ಸ್ಪರ್ಧಿಸಿದರೆ, ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು ಕಣದಲ್ಲಿದ್ದಾರೆ. ಶಿಕ್ಷಕರ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ತಮ್ಮದೇ ಆದ ತಂತ್ರಗಳನ್ನು ರೂಪಿಸಿವೆ. ಈ ಬಾರಿ ಕಾಂಗ್ರೆಸ್ ಗೆಲುವು ದಾಖಲಿಸುತ್ತಾ ಅಥವಾ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತಾ ಅನ್ನೋದಕ್ಕೆ ಮತದಾರರ ತೀರ್ಪೇ ಉತ್ತರ ನೀಡಲಿದೆ.

ಒಟ್ಟಿನಲ್ಲಿ ಈ ನಾಲ್ಕು ಕ್ಷೇತ್ರಗಳ ಚುನಾವಣೆಯು ಕಾಂಗ್ರೆಸ್ ಮತ್ತು NDA ಎರಡಕ್ಕೂ ಮಹತ್ವದ್ದಾಗಿದೆ. NDA ಈಗಾಗಲೇ ಮೂರು ಕ್ಷೇತ್ರಗಳನ್ನು ಹೊಂದಿದ್ದು, ಅವುಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಬೆಂಗಳೂರಿನ ಶಿಕ್ಷಕರ ಕ್ಷೇತ್ರವನ್ನೂ ಗೆಲ್ಲುವ ಗುರಿ ಹೊಂದಿದ್ದು, ಮತದಾರರ ತೀರ್ಪು ಯಾರ ಪರವಾಗಿರಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
MUST WATCH : ಕುಡಿಯುವ ನೀರಿಗಾಗಿ ಹಾಹಾಕಾರ – ಖಾಲಿ ಕೊಡ ಹಿಡಿದು ಪಂಚಾಯ್ತಿಗೆ ಮುತ್ತಿಗೆ




