
ಇನ್ಮುಂದೆ ‘ವಾಟ್ಸಾಪ್’ನಲ್ಲೇ ಸಿಗಲಿದೆ ‘KSRTC ಬಸ್’ ಟಿಕೆಟ್: ಜಸ್ಟ್ ಹೀಗೆ ಮಾಡಿ ಸಾಕು!
ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಹಾಗೂ ಬಿಎಂಟಿಸಿಯನ್ನು ಒಂದೇ ವೇದಿಕೆಗೆ ತರುವ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಅನ್ನು ಬಿಡುಗಡೆ ಮಾಡಿದೆ.
ವಿಧಾನಸೌಧದಲ್ಲಿ ನಡೆದ ಸರ್ಕಾರದ 100 ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನೂತನ ಡಿಜಿಟಲ್ ಸೇವೆಗಳಿಗೆ ಅಧಿಕೃತ ಚಾಲನೆ ನೀಡಿದರು.

ಒಂದೇ ಆ್ಯಪ್ನಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆ
ಬಳಕೆದಾರ ಸ್ನೇಹಿ ವಿನ್ಯಾಸ ಹೊಂದಿರುವ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಮೂಲಕ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಒಂದೇ ಮೊಬೈಲ್ ವೇದಿಕೆಯಲ್ಲಿ ಪಡೆಯಬಹುದಾಗಿದೆ.
ಸುರಕ್ಷಿತ ಲಾಗಿನ್, ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕಿಂಗ್ ವಿವರಗಳು ಹಾಗೂ ವಹಿವಾಟು ನಿರ್ವಹಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಆ್ಯಪ್ನಲ್ಲಿ ಕಲ್ಪಿಸಲಾಗಿದೆ. ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಅವುಗಳ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯೂ ಇರಲಿದೆ.
ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಮಾಸಿಕ ಪಾಸ್ ವಿತರಣೆ ಹಾಗೂ ನವೀಕರಣ ಸೌಲಭ್ಯವನ್ನೂ ಆ್ಯಪ್ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ.
READ THIS : `WhatsApp’ ಬಳಕೆದಾರರೇ ಎಚ್ಚರ – ಈ ಮೆಸೇಜ್ ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿ !

ವಾಟ್ಸಾಪ್ನಲ್ಲೇ ಬಸ್ ಟಿಕೆಟ್ ಬುಕ್ಕಿಂಗ್
ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಸೌಲಭ್ಯವಾಗಿ ವಾಟ್ಸಾಪ್ ಮೂಲಕವೇ ಬಸ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಆರಂಭಿಸಲಾಗಿದೆ. ಪ್ರಯಾಣಿಕರು +91 6364940880 ಸಂಖ್ಯೆಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸುವ ಮೂಲಕ ಕೆಎಸ್ಆರ್ಟಿಸಿ, NWKRTC ಹಾಗೂ KKRTC ಬಸ್ಗಳ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ವಾಟ್ಸಾಪ್ನ ಸಂವಾದಾತ್ಮಕ ವ್ಯವಸ್ಥೆ ಪ್ರಯಾಣಿಕರಿಗೆ ಹಂತ ಹಂತವಾಗಿ ಮಾರ್ಗದರ್ಶನ ನೀಡಲಿದ್ದು, ಆರಂಭಿಕ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕ ನಮೂದಿಸಿ ಲಭ್ಯವಿರುವ ಬಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ವಾಲೆಟ್ ಮೂಲಕ ಹಣ ಪಾವತಿಸಿದ ಬಳಿಕ ಇ-ಟಿಕೆಟ್ ವಾಟ್ಸಾಪ್ ಹಾಗೂ ಇ-ಮೇಲ್ ಮೂಲಕ ದೊರೆಯಲಿದೆ.
ಟಿಕೆಟ್ ರದ್ದತಿಗೂ ವಾಟ್ಸಾಪ್ ಸೌಲಭ್ಯ
ಇನ್ನು ವಾಟ್ಸಾಪ್ ಮೂಲಕ ಬುಕ್ ಮಾಡಿದ ಟಿಕೆಟ್ಗಳನ್ನು ಅದೇ ವೇದಿಕೆಯಲ್ಲೇ ರದ್ದುಪಡಿಸುವ ಅವಕಾಶವೂ ಇದೆ. ಇದಕ್ಕಾಗಿ ಪ್ರಯಾಣಿಕರು ಮೇಲಿನ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ‘Ticket Cancellation’ ಆಯ್ಕೆಯನ್ನು ಆರಿಸಬೇಕು. ಬಳಿಕ PNR ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ Transaction Password ನಮೂದಿಸುವ ಮೂಲಕ ಟಿಕೆಟ್ ರದ್ದುಪಡಿಸಬಹುದಾಗಿದೆ.

ತಾಂತ್ರಿಕ ನೆರವಿಗೆ ಸಹಾಯವಾಣಿ
ಟಿಕೆಟ್ ಬುಕ್ಕಿಂಗ್ ಅಥವಾ ತಾಂತ್ರಿಕ ನೆರವಿಗಾಗಿ ಕೆಎಸ್ಆರ್ಟಿಸಿಯ 24×7 ಕಾಲ್ ಸೆಂಟರ್ 080-26252625 ಸಂಖ್ಯೆಗೆ ಸಂಪರ್ಕಿಸಬಹುದು. ಅದೇ ರೀತಿ, AWATAR ಕಂಟ್ರೋಲ್ ರೂಂನ 7760990034 / 7760990035 ಸಂಖ್ಯೆಗಳಿಗೂ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಸಂಪರ್ಕಿಸಬಹುದಾಗಿದೆ. ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರುವ ಮೂಲಕ ಭವಿಷ್ಯದ ಏಕೀಕೃತ ಮೊಬಿಲಿಟಿ ವ್ಯವಸ್ಥೆಗೆ ಈ ಹೊಸ ವ್ಯವಸ್ಥೆ ಭದ್ರ ಬುನಾದಿ ಹಾಕಲಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.
MUST WATCH : MRPಗಿಂತ ಹೆಚ್ಚಿನ ಹಣ ವಸೂಲಿ – ವೈನ್ಸ್ ವಿರುದ್ಧ ಮದ್ಯಪ್ರಿಯರು ಕೆಂಡ.!



