Job Alert : ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ; 10 ನೇ ತರಗತಿ ಪಾಸಾಗಿದ್ರೆ ಸಾಕು!

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶವೊಂದು ದೊರೆತಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಪ್ರದೇಶಗಳಲ್ಲಿ ಖಾಲಿ ಇರುವ 7 ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗಳಿಗೆ ಇಲಾಖೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 31, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.
ಶೈಕ್ಷಣಿಕ ಅರ್ಹತೆ, ವಯೋಮಿತಿ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಭಾರತೀಯ ನಾಗರಿಕರಾಗಿರಬೇಕು.
2026ರ ಆಗಸ್ಟ್ 31ಕ್ಕೆ ಅಭ್ಯರ್ಥಿಗಳ ವಯಸ್ಸು 18ರಿಂದ 25 ವರ್ಷದೊಳಗಿರಬೇಕು. ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಸಿಗಲಿದೆ.
ಅಂಗವಿಕಲರು, ಮಾಜಿ ಸೈನಿಕರು ಹಾಗೂ ಅರ್ಹ ಕೇಂದ್ರ ಸರ್ಕಾರಿ ನೌಕರರಿಗೂ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
10ನೇ ತರಗತಿ ಅಂಕಗಳ ಆಧಾರದಲ್ಲಿ ಶಾರ್ಟ್ಲಿಸ್ಟ್
ನೇಮಕಾತಿಯ ಮೊದಲ ಹಂತದಲ್ಲಿ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 280 ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ಅಂದರೆ ಪ್ರತಿ ಹುದ್ದೆಗೆ 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ ಭೋಪಾಲ್ನಲ್ಲಿ ನಡೆಯಲಿದ್ದು, 40 ಅಂಕಗಳ 40 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರಲಿದೆ.
ಇಂಗ್ಲಿಷ್ ಗ್ರಹಿಕೆ, ಹಿಂದಿ, ಆಹಾರ ಮತ್ತು ಪೋಷಣೆ, ಗಣಿತ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಪರೀಕ್ಷೆಯಲ್ಲಿ ಇರಲಿವೆ. ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನ ಇರಲಿದೆ.
ಇದನ್ನು ಓದಿ : ಕೇಂದ್ರ ಸರ್ಕಾರಿ ಉದ್ಯೋಗವಕಾಶ – 389 ಹುದ್ದೆಗಳಿಗೆ ಅರ್ಜಿ ಆಹ್ವಾನ

60 ಅಂಕಗಳ ಕೌಶಲ್ಯ ಪರೀಕ್ಷೆ
ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತವಾಗಿ 60 ಅಂಕಗಳ ಪ್ರಾಯೋಗಿಕ ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ.
ಆಹಾರ ಮತ್ತು ಪಾನೀಯ ತಯಾರಿಕೆ, ಆಹಾರ ನಿರ್ವಹಣೆ, ಬಡಿಸುವಿಕೆ ಹಾಗೂ ನೈರ್ಮಲ್ಯ ಕಾಪಾಡುವಿಕೆಯಲ್ಲಿನ ಅಭ್ಯರ್ಥಿಗಳ ಪ್ರಾಯೋಗಿಕ ಸಾಮರ್ಥ್ಯವನ್ನು ಈ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ.
ಕೌಶಲ್ಯ ಪರೀಕ್ಷೆಯ ಬಳಿಕ ಅರ್ಹ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಪ್ರೊಬೇಶನ್ ಅವಧಿ ಪೂರ್ಣಗೊಳಿಸಬೇಕಾಗುತ್ತದೆ.
₹18,000ರಿಂದ ₹56,900ರವರೆಗೆ ವೇತನ
ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಯು ಗ್ರೂಪ್-ಸಿ, ಗೆಜೆಟೆಡ್ ಅಲ್ಲದ ಮತ್ತು ಸಚಿವಾಲಯೇತರ ಹುದ್ದೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ವೇತನ ಮಟ್ಟ-1ರ ಅಡಿಯಲ್ಲಿ ₹18,000ರಿಂದ ₹56,900ರವರೆಗೆ ಮಾಸಿಕ ವೇತನ ದೊರೆಯಲಿದೆ. ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ (TA) ಸೇರಿದಂತೆ ನಿಯಮಾನುಸಾರ ಇತರ ಸೌಲಭ್ಯಗಳೂ ಲಭ್ಯವಾಗಲಿವೆ.
ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ಅರ್ಹತೆ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಕೆ ವಿಧಾನವನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ನಲ್ಲಿ ಇಲಾಖೆಯ ಅಧಿಸೂಚನೆಗಳು ಮತ್ತು ಸೇವೆಗಳ ಮಾಹಿತಿಯನ್ನು ಪರಿಶೀಲಿಸಬಹುದು.

ಇದನ್ನು ನೋಡಿ : ಅಂಕಲ್ ಪ್ರೀತಿಗೆ ಮನಸೋತ ಆಂಟಿ – ಕಟ್ಟಿಕೊಂಡ ಗಂಡನಿಗೆ ಕಟ್ಟಿದ್ಲು ಚಟ್ಟ




