Mysuru Dasara : ಮೈಸೂರು ದಸರಾ ಮಹೋತ್ಸವಕ್ಕೆ ದಿನಾಂಕ ನಿಗದಿ: ಅ 11ಕ್ಕೆ ಉದ್ಘಾಟನೆ, 21ಕ್ಕೆ ಜಂಬೂಸವಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಸಿದ್ಧತಾ ಸಭೆಯಲ್ಲಿ ಈ ಬಾರಿಯ ದಸರಾ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ.
ಯಾವಾಗ ಮೈಸೂರು ದಸರಾ?
ಅಕ್ಟೋಬರ್ 11ರಂದು ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶುಭ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರಕಲಿದೆ.
ಇದನ್ನು ಓದಿ : ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆನೆಗಳಿಗೆ ಅನಾರೋಗ್ಯ – ತನಿಖೆಗೆ ಅರಣ್ಯ ಸಚಿವ ಸೂಚನೆ

ಚಾಮುಂಡೇಶ್ವರಿ ತಾಯಿಗೆ CM ಹಾಗೂ ಗಣ್ಯರು ಪುಷ್ಪಾರ್ಚನೆ
ಅಕ್ಟೋಬರ್ 21ರಂದು ವಿಜಯದಶಮಿ ಅಂಗವಾಗಿ ವಿಶ್ವವಿಖ್ಯಾತ ಜಂಬೂಸವಾರಿ ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 1.36ರಿಂದ 1.56ರೊಳಗೆ ನಂದಿಧ್ವಜ ಪೂಜೆ ನಡೆಯಲಿದ್ದು, ಸಂಜೆ 4.10ರಿಂದ 4.35ರ ನಡುವೆ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಹಾಗೂ ಗಣ್ಯರು ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಜುಲೈ 26ರಂದು ದಸರಾ ಗಜಪಡೆಯ ಗಜಪಯಣ ಆರಂಭವಾಗಲಿದ್ದು, ಆಗಸ್ಟ್ 26ರಂದು ಮೈಸೂರು ಅರಮನೆ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಹಾಗೂ ಪೂಜೆ ನೆರವೇರಲಿದೆ.

ಕಂಬಳ ಆಯೋಜಿಸುವ ಬಗ್ಗೆ ಚರ್ಚೆ
ಈ ಬಾರಿಯ ದಸರಾದ ವಿಶೇಷ ಆಕರ್ಷಣೆಯಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಕಂಬಳ ನಡೆಸಲು ಕಂಬಳ ಸಮಿತಿ ಮನವಿ ಮಾಡಿದೆ.
ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ
ದಸರಾ ಮಹೋತ್ಸವದ ವೇಳೆ ಭದ್ರತೆ, ಸ್ವಚ್ಛತೆ ಕಾಪಾಡುವುದು, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ವಿಶೇಷ ಉತ್ತೇಜನ ನೀಡುವ ಕುರಿತು ಸಭೆಯಲ್ಲಿ ಸುದೀರ್ಘ ಸಮಾಲೋಚನೆ ಮಾಡಲಾಗಿದೆ.

ಇದನ್ನು ನೋಡಿ : IRAN ಸರ್ವೋಚ್ಛ ನಾಯಕನ ಅಂತ್ಯಕ್ರಿಯೆ – ಚಿಕ್ಕಬಳ್ಳಾಪುರದ ALIPURA ಗ್ರಾಮದಲ್ಲಿ ಶೋಕಸಾಗರ




