ಪ್ರಧಾನಿ ರೇಸ್ನಲ್ಲಿ CM ವಿಜಯ್ಗೆ 3ನೇ ಸ್ಥಾನ!

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ ಮೂರು ತಿಂಗಳಲ್ಲೇ ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇಂಡಿಯಾ ಟುಡೇ–ಸಿವೋಟರ್ ನಡೆಸಿದ ಆಗಸ್ಟ್ 2026ರ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿಗಳ ಪೈಕಿ ವಿಜಯ್ ಮೂರನೇ ಸ್ಥಾನಕ್ಕೇರಿದ್ದಾರೆ.
ಸಿಎಂ ವಿಜಯ್ಗೆ 3ನೇ ಸ್ಥಾನ!
ಸಮೀಕ್ಷೆಯ ಪ್ರಕಾರ, ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರಿಗೆ ಶೇ. 48.7ರಷ್ಟು ಬೆಂಬಲ ವ್ಯಕ್ತವಾಗಿದ್ದು, ರಾಹುಲ್ ಗಾಂಧಿ ಶೇ. 27.1ರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿಜಯ್ ಶೇ. 9.2ರಷ್ಟು ಬೆಂಬಲದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಶೇ. 2.0, ಅಖಿಲೇಶ್ ಯಾದವ್ ಶೇ. 1.7, ಅಭಿಜಿತ್ ದಿಪ್ಕೆ ಶೇ. 1.3 ಹಾಗೂ ಅರವಿಂದ್ ಕೇಜ್ರಿವಾಲ್ ಶೇ. 1.2ರಷ್ಟು ಬೆಂಬಲ ಪಡೆದಿದ್ದಾರೆ ಎಂದು ವರದಿಯಾಗಿದೆ.

ವಿರೋಧ ಪಕ್ಷಗಳ ಮೈತ್ರಿ ನಾಯಕತ್ವದಲ್ಲೂ ವಿಜಯ್ಗೆ 2ನೇ ಸ್ಥಾನ
‘ಪ್ರಸ್ತುತ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು ಅತ್ಯಂತ ಸೂಕ್ತ ನಾಯಕ ಯಾರು?’ ಎಂಬ ಪ್ರಶ್ನೆಗೂ ಸಮೀಕ್ಷೆಯಲ್ಲಿ ವಿಜಯ್ ಗಮನಾರ್ಹ ಬೆಂಬಲ ಗಳಿಸಿದ್ದಾರೆ.
ರಾಹುಲ್ ಗಾಂಧಿ ಶೇ. 29.0ರಷ್ಟು ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿಜಯ್ ಶೇ. 12.2ರೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಶೇ. 8.5, ಅರವಿಂದ್ ಕೇಜ್ರಿವಾಲ್ ಶೇ. 7.5 ಹಾಗೂ ಅಖಿಲೇಶ್ ಯಾದವ್ ಶೇ. 6.9ರಷ್ಟು ಬೆಂಬಲ ಪಡೆದಿದ್ದಾರೆ.
READ THIS : ಮಂಗಳೂರಿನಲ್ಲಿ CM Vijay ಗೆ ಸ್ವಾಮಿ ವಿವೇಕಾನಂದರ ಪುಸ್ತಕ ಉಡುಗೊರೆ..!!

‘ವಿಜಯ್ ಫಾರ್ ಪಿಎಂ’ ಘೋಷಣೆಗೆ ವೇದಿಕೆ?
ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥರಾಗಿರುವ ವಿಜಯ್ ಅವರ ರಾಷ್ಟ್ರೀಯ ರಾಜಕೀಯ ಪ್ರವೇಶದ ಚರ್ಚೆ ಇದೀಗ ಮತ್ತಷ್ಟು ತೀವ್ರಗೊಂಡಿದೆ. 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ‘ವಿಜಯ್ ಫಾರ್ ಪಿಎಂ’ ಎಂಬ ಘೋಷಣೆಯೂ ರಾಜಕೀಯ ವಲಯದಲ್ಲಿ ಕೇಳಿಬರತೊಡಗಿದೆ.
ಆಗಸ್ಟ್ 18ರಂದು ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ್ದ ಮಾನವ ಸಂಪನ್ಮೂಲ ಸಚಿವ ಶರತ್ಕುಮಾರ್, ವಿಜಯ್ ಅವರನ್ನು ಭಾರತದ ಮುಂದಿನ ಪ್ರಧಾನಿಯಾಗಿ ಬಿಂಬಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಹಗಲಿರುಳು ದುಡಿಯುತ್ತಿರುವ ವಿಜಯ್ ಅವರೇ ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ಅವರು ಪ್ರತಿಪಾದಿಸಿದ್ದರು.
ಇದೇ ವೇಳೆ ಲೋಕೋಪಯೋಗಿ ಸಚಿವ ಆದವ್ ಅರ್ಜುನ್ ಅವರು ಇಂಡಿಯಾ ಟುಡೇ ರೌಂಡ್ಟೇಬಲ್ನಲ್ಲಿ ಮಾತನಾಡಿ, ದಕ್ಷಿಣ ಭಾರತ, ಅದರಲ್ಲೂ ತಮಿಳುನಾಡಿನಿಂದಲೇ ಮುಂದಿನ ಪ್ರಧಾನಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದ್ದರು.

ಮೂರು ವರ್ಷಗಳಲ್ಲಿ ರಾಷ್ಟ್ರಮಟ್ಟದ ಸವಾಲು
2024ರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ, 2026ರ ಮೊದಲ ಚುನಾವಣೆಯಲ್ಲೇ ಗೆದ್ದು ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ವಿಜಯ್ ಅವರ ರಾಜಕೀಯ ಪಯಣ ಅತ್ಯಂತ ವೇಗವಾಗಿ ಸಾಗುತ್ತಿದೆ. ಇದೀಗ MOTN ಸಮೀಕ್ಷೆಯಲ್ಲಿ ಪ್ರಧಾನಿ ಹುದ್ದೆಯ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಮೂರನೇ ಸ್ಥಾನ ಪಡೆದಿರುವುದು ಅವರ ರಾಷ್ಟ್ರೀಯ ಮಟ್ಟದ ಜನಪ್ರಿಯತೆಯ ಕುರಿತ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.
2029ರ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸಮಯವಿದ್ದು, ಈ ಜನಪ್ರಿಯತೆಯನ್ನು ರಾಷ್ಟ್ರಮಟ್ಟದ ಚುನಾವಣಾ ಮೈತ್ರಿಯಾಗಿ ಪರಿವರ್ತಿಸುವುದು ದೊಡ್ಡ ಸವಾಲು.

MUST WATCH : ತುಮಕೂರಲ್ಲಿ FOOTPATHಗಳಿಗೆ ಮುಕ್ತಿ – 10 ದಿನದಲ್ಲಿ 33 ಕಿ.ಮೀ. ಒತ್ತುವರಿ ತೆರವು..




