ಬ್ರೇಕಿಂಗ್ ನ್ಯೂಸ್: ಎಸ್ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ.. ಚಿಕಿತ್ಸೆ ಫಲಿಸದೆ ಗ್ರಾಮ ಲೆಕ್ಕಾಧಿಕಾರಿ ಸಾವು

Breaking News : ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಭರದಿಂದ ಸಾಗುತ್ತಿರುವ ನಡುವೆಯೇ ತುಮಕೂರಿನಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಎಸ್ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಹಲವು ಗಂಟೆಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಭುವನಾ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಸ್ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ
ತುಮಕೂರು ತಾಲೂಕಿನ ಹೊಳಕಲ್ಲು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಭುವನಾ ಇಂದು ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಗುಳೂರು ಸಮೀಪ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಭುವನಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ : SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಡೆಡ್ಲಿ ಆಕ್ಸಿಡೆಂ*.! VAಗೆ ಗಂಭೀರ ಗಾಯ

ನೆಲಮಂಗಲ ತಾಲೂಕಿನ ಟಿ. ಬೇಗೂರು ನಿವಾಸಿಯಾಗಿದ್ದ ಭುವನಾ, ಗುಳೂರು ಸಮೀಪ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಲಾರಿ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿತ್ತು. ಬಳಿಕ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಚಿಕಿತ್ಸೆ ಫಲಿಸದೆ ಗ್ರಾಮ ಲೆಕ್ಕಾಧಿಕಾರಿ ಭುವನಾ ನಿಧನ
ಇದೇ ವೇಳೆ ಭುವನಾ ಅವರ ಸಂಬಂಧಿಕರು ಹಾಗೂ ಅತ್ತೆ, ಅಧಿಕಾರಿಗಳ ಕೆಲಸದ ಒತ್ತಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ದುರ್ಘಟನೆ ಖಂಡಿಸಿ ಸಿದ್ದಗಂಗಾ ಆಸ್ಪತ್ರೆ ಎದುರು ಗ್ರಾಮ ಲೆಕ್ಕಾಧಿಕಾರಿಗಳು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕೆಲಸದ ಒತ್ತಡ ಹಾಗೂ ಕರ್ತವ್ಯದ ಪರಿಸ್ಥಿತಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು. ಸದ್ಯ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿಕ್ಕಿ ಹೊಡೆದು ಪರಾರಿಯಾದ ವಾಹನದ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
MUST WATCH : SIR ಪ್ರಕ್ರಿಯೆಗೆ ತೆರಳುತ್ತಿದ್ದಾಗ ಭೀಕರ ಅಪಘಾ* ವಿಎ ಸಾವು ಬದುಕಿನ ನಡುವೆ ಹೋರಾಟ




