Theft : ಚಿನ್ನ ಬಿಟ್ಟು ಬೆಳ್ಳಿಯನ್ನೇ ಕದ್ದಿದ್ದ ಕಳ್ಳರು – ರಾಜಸ್ಥಾನದಲ್ಲಿ ಖದೀಮರ ಗ್ಯಾಂಗ್ ಅರೆಸ್ಟ್..!

ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಂದೆಡೆ ತೀರ್ಥಯಾತ್ರೆಗೆ ತೆರಳಿದ್ದ ಮನೆಯನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದ ಗ್ಯಾಂಗ್ ಬಂಧನವಾಗಿದ್ರೆ, ಮತ್ತೊಂದೆಡೆ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿ ಕೋಟ್ಯಾಂತರ ಮೌಲ್ಯದ ಬೆಳ್ಳಿ ಕದ್ದಿದ್ದ ಖದೀಮರನ್ನೂ ಪೊಲೀಸರು ಬಂಧಿಸಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
ತೀರ್ಥಯಾತ್ರೆಗೆ ತೆರಳಿದ್ದ ಕುಟುಂಬದ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮನೆ ಮುಂದೆ ಬಿದ್ದಿದ್ದ ನ್ಯೂಸ್ ಪೇಪರ್ ಹಾಗೂ ಬೀಗ ಹಾಕಿದ್ದನ್ನೇ ಗುರುತು ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕಾಶಿಯಾತ್ರೆಗೆ ತೆರಳಿದ್ದ ವೇಲೆ ಕಳ್ಳತನ
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಲೇಔಟ್ನಲ್ಲಿ ಮಾರ್ಚ್ 26ರಂದು ಈ ಕಳ್ಳತನ ನಡೆದಿತ್ತು. ಮನೆಯವರು ಕಾಶಿಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಆರೋಪಿಗಳು, ಮನೆಯ ಲಾಕರ್ ಒಡೆಯಲು ಯತ್ನಿಸಿ, ಲಾಕರ್ ಓಪನ್ ಆಗದ ಹಿನ್ನೆಲೆ ಅದನ್ನೇ ಹೊಡೆದು ಹಾಕಿ ಪರಾರಿಯಾಗಿದ್ದ ಗಂಗಾಧರ, ಬಸವ ಹಾಗೂ ಕಿರಣ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಂದ 500 ಗ್ರಾಂ ಚಿನ್ನಾಭರಣ, 750 ಗ್ರಾಂ ಬೆಳ್ಳಿ ಹಾಗೂ 1 ಲಕ್ಷ 43 ಸಾವಿರ ರೂಪಾಯಿ ನಗದು ಸೇರಿ ಒಟ್ಟು 70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : ಮನೆ ದರೋಡೆ ಮಾಡಿ ಚಿನ್ನಾಭರಣ ದೋಚಿದ್ದ ಕಳ್ಳರು ಅಂದರ್

ಜ್ಯುವೆಲರಿ ಅಂಗಡಿಯಲ್ಲಿ ಕದ್ದಿದ್ದವರು ಅರೆಸ್ಟ್!
ಮತ್ತೊಂದೆಡೆ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿಯ ಗೋಡೆ ಕೊರೆದು ಕೆಜಿಗಟ್ಟಲೇ ಬೆಳ್ಳಿ ಕದ್ದೊಯ್ದಿದ್ದ ಖತರ್ನಾಕ್ ಗ್ಯಾಂಗ್ನ ಮೂವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಕೋಟ್ಯಾಂತರ ಮೌಲ್ಯದ ಬೆಳ್ಳಿ ದೋಚಿ ರಾಜ್ಯದಿಂದ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕೇವಲ ಬೆಳ್ಳಿಯನ್ನೇ ಟಾರ್ಗೆಟ್
ಇನ್ನು ಕಣ್ಣ ಮುಂದೆ ಬಂಗಾರ ಇದ್ದರೂ ಅದನ್ನು ಮುಟ್ಟದೇ, ಕೇವಲ ಬೆಳ್ಳಿಯನ್ನೇ ಟಾರ್ಗೆಟ್ ಮಾಡಿದ್ದ ಖದೀಮರು, ಕದ್ದ ಬೆಳ್ಳಿಯ ಒಂದು ಭಾಗವನ್ನ ಹೈದರಾಬಾದ್ನಲ್ಲಿ ಮಾರಾಟ ಮಾಡಿ ಬಳಿಕ ರಾಜಸ್ಥಾನಕ್ಕೆ ಪರಾರಿಯಾಗಿದ್ದರು. ಇದೀಗ ಪೊಲೀಸರು ಜಾಟ್ ಸುರೇಶ್, ಧನರಾಮ್ ಹಾಗೂ ನೇಮಿ ಚಂದ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 36 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದು, ಪ್ರಕರಣದ ಕಿಂಗ್ಪಿನ್ ಮಹೇಂದ್ರಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನು ನೋಡಿ : ಕಾಂಪೌಂಡ್ ಕಾಮಗಾರಿ ವೇಳೆ ಅವಘಡ – ಗೋಡೆ ಕುಸಿದು ಬಾಲ ಕಾರ್ಮಿಕ ಸಾ*




