Kantara ಚಾವುಂಡಿ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಕ್ಷಮೆಯಾಚಿಸಿದ್ದಾರೆ.

‘Kantara’ ಸಿನಿಮಾದ ಪಂಜುರ್ಲಿ ಹಾಗೂ ಚಾವುಂಡಿ ದೈವದ ಪಾತ್ರವನ್ನು “ಹೆಣ್ಣು ದೆವ್ವ” ಎಂದು ಕರೆದ ಆರೋಪ ಮತ್ತು ವೇದಿಕೆಯಲ್ಲಿ ಅನುಕರಣೆ ಮಾಡಿ ಅಪಹಾಸ್ಯ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಚಾಮುಂಡಿ ತಾಯಿ ಎದುರು ತಲೆಬಾಗಿ ರಣವೀರ್ ಸಿಂಗ್ ಕ್ಷಮೆಯಾಚನೆ
ಹೌದು.. ಯಾರಿಗೂ ಮುನ್ಸೂಚನೆ ನೀಡದಂತೆ ರಹಸ್ಯವಾಗಿ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿದ ಅವರು, ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮಿಂದಾದ ತಪ್ಪಿಗೆ ತಾಯಿಯ ಸನ್ನಿಧಿಯಲ್ಲಿ ತಲೆಬಾಗಿ ಕ್ಷಮೆಯಾಚಿಸಿದ್ದಾರೆ. ರಣವೀರ್ ಸಿಂಗ್ ಅವರು ದೇವಸ್ಥಾನದ ಗರ್ಭಗುಡಿಯ ಮುಂದೆ ಅತ್ಯಂತ ಭಕ್ತಿಭಾವದಿಂದ ಕುಳಿತು, ಕೈಮುಗಿದು ತಲೆಬಾಗಿ ಕ್ಷಮೆ ಕೇಳುತ್ತಿರುವ ಫೋಟೋಗಳು ಪ್ರಸ್ತುತ ಸೋಶಿಯಲ್ ಮಿಡಿಯಾಗಳಲ್ಲಿ ಭಾರಿ ವೈರಲ್ ಆಗಿವೆ.
ಇದನ್ನು ಓದಿ : ದೈವನಿಂದನೆ ಪ್ರಕರಣ: ನಟ Ranveer Singh ಗೆ ಮತ್ತೆ ನೋಟಿಸ್..!!

Kantara ದೈವಕ್ಕೆ ಅಪಮಾನ – ಏನಿದು ಪ್ರಕರಣ?
ಈ ಹಿಂದೆ ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ವೇದಿಕೆಯಲ್ಲಿ ‘ಕಾಂತಾರ’ ಚಿತ್ರದ ಕುರಿತು ಮಾತನಾಡುವ ವೇಳೆ ರಣವೀರ್ ಸಿಂಗ್ ನೀಡಿದ ಹೇಳಿಕೆಗಳು ಹಾಗೂ ದೈವದ ಅನುಕರಣೆಯ ವಿಡಿಯೋಗಳು ಭಾರೀ ವಿವಾದಕ್ಕೆ ಕಾರಣವಾಗಿದ್ದವು. ವಿಶೇಷವಾಗಿ ತುಳುನಾಡಿನ ದೈವಾರಾಧನೆ ಸಂಸ್ಕೃತಿಯನ್ನು ಅವಮಾನಿಸಲಾಗಿದೆ ಎಂಬ ಆರೋಪಗಳು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು.

ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ರಣವೀರ್ ಸಿಂಗ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕ್ಷಮೆಯಾಚಿಸಿದ್ದರು. ಜೊತೆಗೆ ಕರ್ನಾಟಕದ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾಯಶ್ಚಿತ್ತ ಪೂಜೆ ಸಲ್ಲಿಸುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಮೈಸೂರಿಗೆ ಆಗಮಿಸಿರುವ ಅವರು ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





