
Pavagada | ಬೆಟ್ಟದಲ್ಲಿ ಅಡಗಿದ್ದ `ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಬಂಧನ
ಕಳೆದ ಹಲವು ತಿಂಗಳಿಂದ ಪಾವಗಡ ಭಾಗದಲ್ಲಿ ನಕ್ಸಲ್ ಭೀತಿ ಸೃಷ್ಟಿಸಿ ಗ್ರಾಮಸ್ಥರು ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಸುಡೋ ನಕ್ಸಲ್ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಕ್ಸಲ್ ಹೆಸರಿನಲ್ಲಿ ಬೆದರಿಕೆ ಪತ್ರ, ನಾಡಬಾಂಬ್ ಪ್ರಕರಣ ಹಾಗೂ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿದ್ದ ಕನಕಲಬಂಡೆ ವೆಂಕಟೇಶ್ ಬಂಧನದೊಂದಿಗೆ ಪಾವಗಡದಲ್ಲಿ ನಡೆದಿದ್ದ ಹಲವು ಅನುಮಾನಾಸ್ಪದ ಘಟನೆಗಳಿಗೆ ಹೊಸ ತಿರುವು ಸಿಕ್ಕಿದೆ.
5 ಲಕ್ಷ ನೀಡುವಂತೆ ಬೇಡಿಕೆ
ಪಾವಗಡ ತಾಲೂಕಿನ ಗಂಗಸಾಗರ ಗ್ರಾಮದ ರೈತ ಮುತ್ತಕುಂಟ್ಲ ಭೂಷಪ್ಪ ಅವರ ಜಮೀನಿನ ಗೇಟ್ಗೆ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಪತ್ರ ಅಂಟಿಸಲಾಗಿತ್ತು.
ತೆಲುಗು ಭಾಷೆಯಲ್ಲಿ ಬರೆಯಲಾಗಿದ್ದ ಪತ್ರದಲ್ಲಿ ಪೀಪಲ್ಸ್ ವಾರ್ ದಳಂ ಹೆಸರನ್ನು ಬಳಸಿಕೊಂಡು ಐದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡಲಾಗಿತ್ತು.
ಈ ಘಟನೆ ಇಡೀ ಪಾವಗಡ ಭಾಗದಲ್ಲಿ ಆತಂಕ ಸೃಷ್ಟಿಸಿತ್ತು. ಪತ್ರ ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿ ಪತ್ರ ಅಂಟಿಸಿದವರ ಪತ್ತೆಗೆ ಬಲೆ ಬೀಸಿದ್ದರು.
READ THIS : ಪಾವಗಡದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ – ಪೊಲೀಸರಿಂದ ಶರುವಾಯ್ತು ತನಿಖೆ

ಗಡಿಭಾಗದಲ್ಲಿ ನಿಜವಾಗಿಯೂ ನಕ್ಸಲ್ ಚಟುವಟಿಕೆ
ಇದಕ್ಕೂ ಮೊದಲು ರೈತನ ಪಂಪ್ಸೆಟ್ ಬಳಿ ನಾಡಬಾಂಬ್ ಸ್ಫೋಟ ಪ್ರಕರಣ ನಡೆದಿದ್ದು, ನಕ್ಸಲ್ ಚಟುವಟಿಕೆಗಳ ಬಗ್ಗೆ ಅನುಮಾನ ಮತ್ತಷ್ಟು ಹೆಚ್ಚಿಸಿತ್ತು. ಪಾವಗಡ ಗಡಿಭಾಗದಲ್ಲಿ ನಿಜವಾಗಿಯೂ ನಕ್ಸಲ್ ಚಟುವಟಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸರು ಹೈ ಅಲರ್ಟ್ ಆಗಿದ್ದರು. ಎಎಸ್ಪಿ ಗೋಪಾಲ್ ಅವ್ರ ನೇತೃತ್ವದಲ್ಲಿ ಜಿಲ್ಲಾ ವಿಶೇಷ ಪಡೆ ಹಾಗೂ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಪಾವಗಡ-ಆಂಧ್ರ ಗಡಿ ಭಾಗಗಳು, ಗಂಗಸಾಗರ, ಕನಕಲಬಂಡೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಬೆಟ್ಟಗುಡ್ಡಗಳು, ಅರಣ್ಯ ಪ್ರದೇಶಗಳು ಹಾಗೂ ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿ ಮಾಹಿತಿ ಕಲೆಹಾಕಲಾಗಿತ್ತು.
ಸುಡೋ ನಕ್ಸಲ್’ ಕನಕಲಬಂಡೆ ವೆಂಕಟೇಶ್ ಅರೆಸ್ಟ್!
ಕೂಂಬಿಂಗ್ ಕಾರ್ಯಾಚರಣೆ ನಡುವೆಯೇ ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಅಡಗಿ ಕುಳಿತಿದ್ದ ಕನಕಲಬಂಡೆ ವೆಂಕಟೇಶ್ ಅಲಿಯಾಸ್ ಸುಡೋ ನಕ್ಸಲ್ ವೆಂಕಟೇಶ್ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪತ್ರದ ಹಿಂದೆ ಇದೇ ವ್ಯಕ್ತಿಯ ಕೈವಾಡ ಇದ್ಯಾ?
ಇದೀಗ ವೆಂಕಟೇಶ್ ಬಂಧನದ ಬಳಿಕ ಗಂಗಸಾಗರದಲ್ಲಿ ಪತ್ತೆಯಾಗಿದ್ದ ಬೆದರಿಕೆ ಪತ್ರ, ನಾಡಬಾಂಬ್ ಪ್ರಕರಣ ಹಾಗೂ ಗ್ರಾಮಸ್ಥರಿಗೆ ನೀಡಲಾಗಿದ್ದ ಬೆದರಿಕೆಗಳ ನಡುವಿನ ಸಂಬಂಧದ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಬೆದರಿಕೆ ಪತ್ರದ ಹಿಂದೆ ಇದೇ ವ್ಯಕ್ತಿಯ ಕೈವಾಡ ಇದೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ. ಒಟ್ಟಾರೆ ನಕ್ಸಲ್ ಭೀತಿ ಸೃಷ್ಟಿಸಿ ಪಾವಗಡ ಜನರಲ್ಲಿ ಆತಂಕ ಮೂಡಿಸಿದ್ದ ಪ್ರಕರಣದಲ್ಲಿ ಸುಡೋ ನಕ್ಸಲ್ ವೆಂಕಟೇಶ್ ಬಂಧನ ಮಹತ್ವದ ಬೆಳವಣಿಗೆಯಾಗಿದ್ದು,ಈತನ ವಿಚಾರಣೆಯಿಂದ ಇನ್ನಷ್ಟು ಸತ್ಯಾಂಶಗಳು ಹೊರಬೀಳುವ ನಿರೀಕ್ಷೆ ಮೂಡಿದೆ.
MUST WATCH : ಗಣೇಶ ಹಬ್ಬದಲ್ಲಿ ಬಿಜೆಪಿ ರಾಜಕೀಯ – BJPಗೆ CHELUVARAYASWAMY ಟಾಂಗ್




