ಆಂಧ್ರಪ್ರದೇಶದಲ್ಲಿ Covid ಗೆ ಇಬ್ಬರು ಬಲಿ!

ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಕೋವಿಡ್-19 ಸೋಂಕಿಗೆ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ಆಂಧ್ರದೊಂದಿಗೆ ಸುದೀರ್ಘ ಗಡಿಯನ್ನು ಹಂಚಿಕೊಂಡಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹೈ ಅಲರ್ಟ್ ಘೋಷಿಸಿದೆ. ಸೋಂಕು ಕರ್ನಾಟಕಕ್ಕೆ ಹರಡದಂತೆ ತಡೆಯುವ ಉದ್ದೇಶದಿಂದ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

5 ಕಡೆ ಚೆಕ್ಪೋಸ್ಟ್ ಸ್ಥಾಪನೆ
ಆಂಧ್ರಪ್ರದೇಶದಿಂದ ಪಾವಗಡಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ವಾಹನಗಳ ಆರೋಗ್ಯ ತಪಾಸಣೆಗಾಗಿ ಗಡಿಭಾಗದ ಐದು ಪ್ರಮುಖ ಸ್ಥಳಗಳಲ್ಲಿ Covid ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜವಂತಿ, ನಾಗಲಮಡಿಕೆ, ಅರಸೀಕೆರೆ, ಟಿ.ಎನ್. ಪೇಟೆ ಸೇರಿದಂತೆ ಒಟ್ಟು ಐದು ಪ್ರದೇಶಗಳಲ್ಲಿ ಚೆಕ್ಪೋಸ್ಟ್ಗಳನ್ನು ಆರಂಭಿಸಲಾಗಿದ್ದು, ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ತಪಾಸಣೆ ನಡೆಸಲು ಸೂಚಿಸಲಾಗಿದೆ.
ಇದನ್ನು ಓದಿ : ಮತ್ತೆ Corona ಆತಂಕ – ಕಳೆದ 15 ದಿನದಲ್ಲಿ 32 ಪಾಸಿಟಿವ್ ಕೇಸ್!

ತಹಶೀಲ್ದಾರ್ ಕಟ್ಟುನಿಟ್ಟಿನ ಆದೇಶ
ಪಾವಗಡ ತಹಶೀಲ್ದಾರ್ ಅವರು ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅದಿಕಾರಿಗಳಿಗೆ (PDO) ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆಂಧ್ರದಿಂದ ಬರುವವರ ಮೇಲೆ ನಿರಂತರ ನಿಗಾ ವಹಿಸುವುದು, ಗಡಿ ಗ್ರಾಮಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಹಾಗೂ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದಂತೆ ಸೂಚಿಸಲಾಗಿದೆ.

Covid – ಜಿಲ್ಲಾಧಿಕಾರಿಗಳು ತುರ್ತು ಸಭೆ
ನೆರೆರಾಜ್ಯ ಆಂಧ್ರದಲ್ಲಿ ಕೋವಿಡ್ ನಿಂದ ಸಾವು ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ತುಮಕೂರು ಜಿಲ್ಲಾಧಿಕಾರಿಗಳು ನಿನ್ನೆಯಷ್ಟೇ ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಜಿಲ್ಲೆಯ ತಹಶೀಲ್ದಾರ್ಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಪಾವಗಡ ತಾಲೂಕು ಆಡಳಿತ ಗಡಿಭಾಗದಲ್ಲಿ ತಪಾಸಣೆ ಮತ್ತು ನಿಗಾವನ್ನು ಮತ್ತಷ್ಟು ಬಿಗಿಗೊಳಿಸಿದೆ.
ಇದನ್ನು ನೋಡಿ : ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರೊಟೆಸ್ಟ್ – ತಹಶೀಲ್ದಾರ್ ಕಚೇರಿ ಮುಂದೆ ನಾರಿಯರ ಆಕ್ರೋಶ





