ಸಿವಿಲ್ Police Constable ನೇಮಕಾತಿ – ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಅವಧಿ ಜುಲೈ 8ರವರೆಗೆ ವಿಸ್ತರಣೆ

ರಾಜ್ಯದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (CPC) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಸಿಹಿ ಸುದ್ದಿ ನೀಡಿದೆ. ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿರುವ ಪ್ರಾಧಿಕಾರವು, ಆನ್ಲೈನ್ ಅರ್ಜಿ ಸಲ್ಲಿಕೆ ಹಾಗೂ ಅರ್ಜಿ ಶುಲ್ಕ ಪಾವತಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ನೀಡಿರುವ ಮಾಹಿತಿಯಂತೆ, ಸಿವಿಲ್ Police Constable ನೇಮಕಾತಿಗೆ ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗೆ ಜುಲೈ 8 ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ತಾಂತ್ರಿಕ ತೊಂದರೆ ಅಥವಾ ಇತರೆ ಕಾರಣಗಳಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಇದು ಕೊನೆಯ ಅವಕಾಶವಾಗಿದೆ.
ಇದನ್ನು ಓದಿ : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬಂಪರ್ ನೇಮಕಾತಿ!

ಅರ್ಜಿ ತಿದ್ದುಪಡಿಗೆ ವಿಶೇಷ ಅವಕಾಶ
ಇದರ ಜೊತೆಗೆ, ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಮ್ಮ ಅರ್ಜಿಯಲ್ಲಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ವಿಶೇಷ ಅವಕಾಶವೂ ನೀಡಲಾಗಿದೆ.
ಜುಲೈ 10ರಿಂದ ಜುಲೈ 13ರವರೆಗೆ ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂದು KEA ಪ್ರಕಟಿಸಿದೆ.
ಹಳೆಯ ವೇಳಾಪಟ್ಟಿ ಹೀಗಿತ್ತು
ಈ ಹಿಂದೆ ಪ್ರಕಟಿಸಲಾಗಿದ್ದ ವೇಳಾಪಟ್ಟಿಯ ಪ್ರಕಾರ, ಅರ್ಜಿ ಸಲ್ಲಿಕೆಗೆ ಜುಲೈ 3 ಹಾಗೂ ಶುಲ್ಕ ಪಾವತಿಗೆ ಜುಲೈ 4 ಕೊನೆಯ ದಿನವಾಗಿತ್ತು. ಆದರೆ ಅಭ್ಯರ್ಥಿಗಳ ಅನುಕೂಲಕ್ಕಾಗಿ ಇದೀಗ ಈ ಅವಧಿಯನ್ನು ವಿಸ್ತರಿಸಲಾಗಿದೆ.

ಮತ್ತೊಮ್ಮೆ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ
ಅಭ್ಯರ್ಥಿಗಳು ಕೊನೆಯ ಕ್ಷಣದವರೆಗೆ ಕಾಯದೇ, ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಯನ್ನು ಪೂರ್ಣಗೊಳಿಸಬೇಕು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸಲಹೆ ನೀಡಿದ್ದಾರೆ.
ಜುಲೈ 8 ಸಂಜೆ 4 ಗಂಟೆಯ ನಂತರ ಅರ್ಜಿ ಸಲ್ಲಿಕೆ ಲಿಂಕ್ ಸ್ಥಗಿತಗೊಳ್ಳಲಿದ್ದು, ಮತ್ತೊಮ್ಮೆ ಅವಧಿ ವಿಸ್ತರಣೆ ಸಾಧ್ಯತೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಇದನ್ನು ನೋಡಿ : ನೆಲಮಂಗಲದತ್ತ ಹೊರಟ ಭುವನ ಮೃತದೇಹ – ಅಗಲಿದ ಸಿಬ್ಬಂದಿಗೆ ತುಮಕೂರಿನಲ್ಲಿ ಕಣ್ಣೀರ ವಿದಾಯ




