Rain Alert : ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿಗೆ ರೆಡ್ ಅಲರ್ಟ್, ಹಲವು ಜಿಲ್ಲೆಗಳಿಗೆ ಆರೆಂಜ್-ಯೆಲ್ಲೋ ಅಲರ್ಟ್ ಘೋಷಣೆ

Rain Alert : ರಾಜ್ಯದಲ್ಲಿ ನೈಋತ್ಯ ಮುಂಗಾರು ಮತ್ತಷ್ಟು ಬಿರುಸುಗೊಂಡಿದ್ದು, ಜುಲೈ 5ರಿಂದ 7ರವರೆಗೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳಿಗೆ ರೆಡ್, ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 5, 6 ಮತ್ತು 7ರಂದು 204.5 ಮಿ.ಮೀ.ಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ನಿರಂತರ ಮಳೆಯಿಂದ ನದಿಗಳು ಉಕ್ಕಿ ಹರಿಯುವ, ತಗ್ಗು ಪ್ರದೇಶಗಳು ಜಲಾವೃತವಾಗುವ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಿರುಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನು ಓದಿ : ರಾಜ್ಯದ ಹಲವೆಡೆ ಮಳೆ ಕೊರತೆ – ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ 64.5 ರಿಂದ 115.4 ಮಿ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಮಳೆಯಿಂದ ರಸ್ತೆಗಳಲ್ಲಿ ನೀರು ನಿಲ್ಲುವುದು, ಸಂಚಾರ ದಟ್ಟಣೆ, ಗೋಚರತೆ ಕಡಿಮೆಯಾಗುವುದು ಹಾಗೂ ಕೃಷಿ ಚಟುವವಟಿಕೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.

ಮೀನುಗಾರರು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರವಾಹ ಹಾಗೂ ಭೂಕುಸಿತ ಸಂಭವಿಸುವ ಪ್ರದೇಶಗಳಿಗೆ ಅನಗತ್ಯವಾಗಿ ತೆರಳಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.
ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆ ಸೂಚನೆ
ಜಿಲ್ಲಾಡಳಿತಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದ್ದು, ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಸಾರ್ವಜನಿಕರು ಹವಾಮಾನ ಇಲಾಖೆಯ ಅಧಿಕೃತ ಮಾಹಿತಿ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರಂತರ ಮಳೆಯ ಹಿನ್ನೆಲೆಯಲ್ಲಿ ವಿದ್ಯುತ್, ಸಾರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆಯೂ ಇದೆ.

ಇದನ್ನು ನೋಡಿ : ಡಿಸಿ ಕಚೇರಿ ಎದುರು ಭಾರಿ ಪ್ರತಿಭಟನೆ – ಡಿಸಿಎಂ ಸ್ಥಳಕ್ಕೆ ಬರುವಂತೆ ನೌಕರರ ಪಟ್ಟು




