
KALABURAGI : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಭಯಾನಕ ಘಟನೆ ನಡೆದಿದೆ. ಯುವಕನ ಆತ್ಮಹತ್ಯೆಗೆ ಪ್ರತೀಕಾರವಾಗಿ, ಯುವತಿಯ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಳಖೇಡ ಗ್ರಾಮದ ಭಾಗ್ಯಶ್ರೀ ಸುಲಹಳ್ಳಿ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ. ಸೆಪ್ಟೆಂಬರ್ 11ರಂದು ಭಾಗ್ಯಶ್ರೀ ತನ್ನ ಅಕ್ಕನೊಂದಿಗೆ ವಾಕಿಂಗ್ ಗೆ ಹೋಗಿದ್ದಳು. ವಾಕಿಂಗ್ ನಡುವೆ ಅಕ್ಕ ಕಿರಾಣಿ ಅಂಗಡಿಗೆ ಹೋದಾಗ, ಯುವತಿ ನಾಪತ್ತೆ ಆಗಿದ್ದಳು. ಕೂಡಲೇ ಮಳಖೇಡ ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ.
ಈ ಸಂಬಂಧ ಪೊಲೀಸರು ಇಂದು ಕಾರ್ಯಾಚರಣೇ ನಡೆಸುವ ವೇಳೆ ಸಿಮೆಂಟ್ ಕಾರ್ಖಾನೆ ಹತ್ತಿರದ ನಾಲೆಯಲ್ಲಿ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ, ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ.
ಕೂಡಲೇ ಪೊಲೀಸರು ತಕ್ಷಣ ಮಂಜುನಾಥ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಈ ಕೊಲೆಗೆ ಆರೋಪಿಯ ಸಹೋದರ ವಿನೋದ್ ಸಿಮೆಂಟ್ ಕಾರ್ಖಾನೆಯಲ್ಲಿ ನೌಕರಿ ಖಾಯಂ ಆಗದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಕಾರ್ಖಾನೆಯಲ್ಲಿ ಯೂನಿಯನ್ ಲೀಡರ್ ಆಗಿದ್ದ ಯುವತಿಯ ತಂದೆ ನೌಕರಿ ಖಾಯಂ ಆಗದಂತೆ ಮಾಡಿದ್ದ. ಹೀಗಾಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿಗೆ ಪ್ರತೀಕಾರವಾಗಿ ಭಾಗ್ಯಶ್ರೀಯನ್ನ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.




