ಪತ್ನಿ ನಡತೆ ಬಗ್ಗೆ ಸಂಶಯ ಪಟ್ಟು ಮನೆಯಲ್ಲೇ Gelatin ಸ್ಫೋಟ : ತಂದೆ–ಮಗಳು ಬಲಿ, ನಾಲ್ವರಿಗೆ ಗಂಭೀರ ಗಾಯ!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ನಡತೆ ಬಗ್ಗೆ ಸಂಶಯಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿಕೊಂಡ ಪರಿಣಾಮ ತಂದೆ ಹಾಗೂ 15 ವರ್ಷದ ಪುತ್ರಿ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಂಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಇಬ್ಬರು ಸಾವು, ನಾಲ್ವರಿಗೆ ಗಂಭೀರ ಗಾಯ
ಮೃತರನ್ನು ಶಿವಲಾಲ್ ಬಲಿರಾಮ್ ರಾಠೋಡ್ (49) ಹಾಗೂ ಅವರ ಪುತ್ರಿ ಮೀರಾ (15) ಎಂದು ಗುರುತಿಸಲಾಗಿದೆ. ಸ್ಫೋಟದಲ್ಲಿ ಶಿವಲಾಲ್ ಅವರ ಪತ್ನಿ ಸವಿತಾ, ಪುತ್ರ ಪ್ರಕಾಶ್, ಸುರೇಖಾ (30) ಹಾಗೂ ವಿವೇಕ್ (12) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮನೆಯಲ್ಲಿ ಜಿಲೆಟಿನ್ ಕಡ್ಡಿ ಬಚ್ಚಿಟ್ಟಿದ್ದ ಆರೋಪ
ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಲಾಲ್, ಅಲ್ಲಿಂದ Gelatin ಕಡ್ಡಿಗಳನ್ನು ತಂದು ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಎನ್ನಲಾಗಿದೆ.
ಪತ್ನಿಯ ನಡತೆ ಬಗ್ಗೆ ಅನುಮಾನ ಹೊಂದಿದ್ದ ಅವರು, ಇದೇ ವಿಚಾರವಾಗಿ ಪದೇಪದೇ ಪತ್ನಿಯೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಇಂದು ಮುಂಜಾನೆ ಮನೆಯಲ್ಲಿದ್ದ ಕುಟುಂಬ ಸದಸ್ಯರೊಂದಿಗೆ ಶಿವಲಾಲ್ ಜಗಳವಾಡಿದ ಬಳಿಕ ಜಿಲೆಟಿನ್ ಕಡ್ಡಿಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸಿಕೊಂಡಿದ್ದಾರೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಮನೆಯ ಒಂದು ಭಾಗ ಸಂಪೂರ್ಣ ಹಾನಿಗೊಳಗಾಗಿದೆ.
ಇದನ್ನು ಓದಿ : ಮೋದಿ ಭೇಟಿ ವೇಳೆ ಭದ್ರತಾ ಲೋಪ? ಸ್ಫೋಟಕ ವಸ್ತು ಪತ್ತೆ!

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳು
ಸ್ಫೋಟದ ಭಾರೀ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಅವಶೇಷಗಳ ನಡುವೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು, ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಶಿವಲಾಲ್ ಹಾಗೂ ಅವರ ಪುತ್ರಿ ಮೀರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Gelatin ಕಡ್ಡಿಗಳು ಶಿವಲಾಲ್ಗೆ ಸಿಕ್ಕಿದೇಗೆ?
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲೆಟಿನ್ ಕಡ್ಡಿಗಳು ಶಿವಲಾಲ್ಗೆ ಹೇಗೆ ಲಭ್ಯವಾದವು.
ಅವುಗಳನ್ನು ಕ್ವಾರಿಯಿಂದ ಮನೆಗೆ ತಂದು ಬಚ್ಚಿಟ್ಟಿದ್ದರೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ಬರ ವೀಕ್ಷಣೆ ಸಂಬಂಧ CM VIDEO ಸಂವಾದ – ಉಸ್ತುವಾರಿ ಅಧಿಕಾರಿಗಳಿಗೆ CM DKS ಸೂಚನೆ





