Droupadi Murmu : ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ ಡೀಪ್ ಫೇಕ್ ವಿಡಿಯೊ ಇದೀಗ ಮತ್ತೆ ಸುದ್ದಿಯಲ್ಲಿದೆ.

ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ ಡೀಪ್ ಫೇಕ್ (Deep Fake) ವಿಡಿಯೇ ವಿವಾದ ಮತ್ತೆ ಚರ್ಚೆಗೆ ಕಾರಣವಾಗಿದೆ. ಈ ಬಾರಿ ನಕಲಿ ಡೀಪ್ ಫೇಕ್ ವಿಡಿಯೊಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತುತ್ತಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ದ್ರೌಪದಿ ಮುರ್ಮು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವಂತೆ ತೋರಿಸಲಾಗಿದೆ. ಈ ವಿಡಿಯೊದಲ್ಲಿ ಅವರು “ರಫೇಲ್ ಯುದ್ಧ ವಿಮಾನ ಖರೀದಿ ಪ್ರಚಾರಕ್ಕಾಗಿ ನನ್ನನ್ನು ಬಲವಂತವಾಗಿ ರಫೇಲ್ ವಿಮಾನದಲ್ಲಿ ಹಾರಾಟ ನಡೆಸುವಂತೆ ಒತ್ತಾಯಿಸಲಾಗಿದೆ” ಎಂದು ಹೇಳುತ್ತಿರುವಂತೆ ತಿರುಚಲಾಗಿದೆ.
ಇದನ್ನು ಓದಿ : ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ನಿರೀಕ್ಷೆ
ಪಾಕ್ನ ಕುತಂತ್ರ ಬಹಿರಂಗ!
ಈ ನಕಲಿ ವಿಡಿಯೊವನ್ನು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳು ಹಂಚಿಕೊಂಡಿದ್ದು, ಭಾರತದ ಸರ್ಕಾರದ ವಿರುದ್ಧ ಪ್ರಚಾರ ಮಾಡಲು ಪ್ರಯತ್ನಿಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನಿ ಪ್ರಚಾರ ಮಾಧ್ಯಮಗಳು ಈ ವಿಡಿಯೋ ಹಂಚಿಕೊಂಡು “ಪ್ರಧಾನಿ ಮೋದಿ ರಾಷ್ಟ್ರಪತಿಯನ್ನು ಪ್ರಚಾರಕ್ಕಾಗಿ ದುರುಪಯೋಗ ಪಡಿಸುತ್ತಿದ್ದಾರೆ” ಎಂದು ಬರೆದುಕೊಂಡಿವೆ.

PIB ಫ್ಯಾಕ್ಟ್ ಚೆಕ್ನ ಸ್ಪಷ್ಟನೆ
ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (PIB) ತನ್ನ ಅಧಿಕೃತ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಮೂಲಕ ಈ ವಿಡಿಯೊ ಕುರಿತು ಸ್ಪಷ್ಟನೆ ನೀಡಿದೆ. PIB ಪ್ರಕಟಿಸಿದ ಹೇಳಿಕೆಯಲ್ಲಿ, “ಈ ವಿಡಿಯೊ ನಕಲಿ ಹಾಗೂ AI-ರಚಿತ ಆಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಪಾಕಿಸ್ತಾನಿ ಪ್ರಚಾರ ಖಾತೆಗಳು ಜನರನ್ನು ದಾರಿ ತಪ್ಪಿಸಲು ಈ ವಿಡಿಯೊವನ್ನು ಹಂಚಿಕೊಂಡಿವೆ,” ಎಂದು ತಿಳಿಸಿದೆ.
ಡೀಪ್ ಫೇಕ್ ವಿಡಿಯೊಗಳ ಬಗ್ಗೆ ಎಚ್ಚರಿಕೆ
ತಜ್ಞರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಡೀಪ್ ಫೇಕ್ ತಂತ್ರಜ್ಞಾನದಿಂದ ರಾಷ್ಟ್ರದ ಭದ್ರತೆಗೂ ಧಕ್ಕೆ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಯಾವುದೇ ವಿಡಿಯೋವನ್ನು ಹಂಚುವ ಮೊದಲು ಅದರ ವಾಸ್ತವಿಕತೆ ಪರಿಶೀಲಿಸುವುದು ಅತ್ಯವಶ್ಯ ಎಂದು ಸಲಹೆ ನೀಡಿದ್ದಾರೆ.

ಇದನ್ನು ನೋಡಿ : ಪ್ರಧಾನಿ ಮೋದಿ ನನ್ನನ್ನು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ…. ವೈರಲಾಗ್ತಿರುವ ದ್ರೌಪದಿ ಮುರ್ಮು ವಿಡಿಯೊದ ಅಸಲಿಯತ್ತೇನು?




