Hassan : ಪ್ರಸಿದ್ಧ ಹಾಸನಾಂಬ ದೇವಿಯ ಉತ್ಸವದ ಸಾರ್ವಜನಿಕ ದರ್ಶನ ಅಕ್ಟೋಬರ್ 22ರಂದು ಕೊನೆಗೊಂಡಿದೆ.

ಪ್ರಸಿದ್ಧ ಹಾಸನಾಂಬ ದೇವಿ ಉತ್ಸವದ ಸಮಾರೋಪ ಕಾರ್ಯಕ್ರಮ ಗುರುವಾರ ಭಕ್ತಿಭಾವದಿಂದ ನೆರವೇರಿತು. ಈ ಸಂದರ್ಭದಲ್ಲಿ ನಡೆದ ಸಿದ್ದೇಶ್ವರ ಸ್ವಾಮಿ ಕೆಂಡೋತ್ಸವದಲ್ಲಿ ನೂರಾರು ಭಕ್ತರೊಂದಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸಹ ಕೆಂಡ ಹಾಯ್ದು ಭಕ್ತಿಯ ಮೆರುಗು ತೋರಿದರು. ಅವರ ಈ ನಡೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಡಿಸಿ ಲತಾಕುಮಾರಿ ಅವರು ಮಾತನಾಡುತ್ತಾ, “ನಾನು ಹಿಂದೆಂದೂ ಕೆಂಡ ಹಾಯ್ದಿರಲಿಲ್ಲ. ಆದರೆ ಇಂದು ಭಕ್ತರ ಭಾವನೆ ನೋಡಿ ನನಗೂ ಹಾಯಬೇಕು ಅನ್ನಿಸಿತು. ಈ ವರ್ಷದ ಹಾಸನಾಂಬ ಉತ್ಸವ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇಂದು ಮಧ್ಯಾಹ್ನ ದೇವಾಲಯದ ಗರ್ಭಗುಡಿಯ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು,” ಎಂದು ಹೇಳಿದರು.
ಇನ್ನು ಪ್ರತಿವರ್ಷದಂತೆ ಈ ಬಾರಿ ಸಹ ಲಕ್ಷಾಂತರ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದು, ಕಳೆದ 13 ದಿನಗಳಲ್ಲಿ ಸುಮಾರು 26,13,000 ಭಕ್ತರು ಹಾಸನಕ್ಕೆ ಆಗಮಿಸಿದ್ದಾರೆ. ದೇಗುಲದ ಟಿಕೆಟ್ ಹಾಗೂ ಲಡ್ಡು ಮಾರಾಟ ಸೇರಿದಂತೆ ಒಟ್ಟು ₹2.18 ಕೋಟಿ ರೂಪಾಯಿ ಆದಾಯ ದಾಖಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಆದಾಯವೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಸಚಿವ ಕೃಷ್ಣಭೈರೇಗೌಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “2025ನೇ ಸಾಲಿನ ಹಾಸನಾಂಬೆ ದರ್ಶನ ಯಶಸ್ವಿಯಾಗಿ ಮುಕ್ತಾಯವಾಗಿದೆ. ಶಾಸಕರು, ಸಂಸದರು, ಜಿಲ್ಲಾಡಳಿತ ಹಾಗೂ ಪೊಲೀಸರ ಸಹಕಾರದಿಂದ ಉತ್ಸವ ಶ್ರೇಷ್ಠವಾಗಿ ನಡೆಯಿತು. ಈ ಬಾರಿ ನೂಕು ನುಗ್ಗಲು ಇಲ್ಲದೆ ಭಕ್ತರಿಗೆ ಸುಗಮ ದರ್ಶನ ಸಿಕ್ಕಿದ್ದು ಅತ್ಯಂತ ಸಂತೋಷದ ವಿಷಯ,” ಎಂದು ಹೇಳಿದರು.
ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದು, ಹಾಸನದ ಕೀರ್ತಿ ಇನ್ನಷ್ಟು ವಿಸ್ತರಿಸಿದೆ. ಹಾಸನಾಂಬ ದರ್ಶನ 2025 ಅನ್ನು ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಮತ್ತು ಸುವ್ಯವಸ್ಥಿತ ಉತ್ಸವವೆಂದು ಎಲ್ಲರು ಮೆಚ್ಚಿದ್ದಾರೆ.

ಇದನ್ನು ನೋಡಿ : ಹಾಸನಾಂಬ ಉತ್ಸವದಲ್ಲಿ ಕೆಂಡ ಹಾಯ್ದು ಗಮನ ಸೆಳೆದ ಡಿಸಿ ಲತಾಕುಮಾರಿ




