Haveri : ಹಾವೇರಿಯಲ್ಲಿ ನಡೆದ ಪ್ರತ್ಯೇಕ ದನ ಬೆದರಿಸುವ ಸ್ಪರ್ಧೆಗಳಲ್ಲಿ ಹೋರಿ ತಿವಿದು ಮೂವರು ಮೃತಪಟ್ಟಿದ್ದಾರೆ.

Haveri : ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಹಾವೇರಿ ಜಿಲ್ಲೆಯ ವಿವಿಧೆಡೆ ನಡೆದ ಹೋರಿ (ಎತ್ತು ಓಟ) ಹಬ್ಬದಲ್ಲಿ ಮೂವರು ದುರ್ಮರಣ ಹೊಂದಿದ ದಾರುಣ ಘಟನೆ ಸಂಭವಿಸಿದೆ. ದೀಪಾವಳಿಯ ಪ್ರಯುಕ್ತ ಅಕ್ಟೋಬರ್ 22ರಂದು ಜಿಲ್ಲೆಯ ನಾನಾ ಭಾಗಗಳಲ್ಲಿ ಹೋರಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅವುಗಳಲ್ಲಿ ಸಂಭವಿಸಿದ ಅಪಘಾತಗಳು ಮೂರು ಜೀವಗಳನ್ನು ಕಸಿದಿವೆ.
ಹಾವೇರಿ ನಗರದ ದಾನೇಶ್ವರಿ ನಗರದ ನಿವಾಸಿ ಚಂದ್ರಶೇಖರ್ ಕೋಡಿಹಳ್ಳಿ (70), ನಿವೃತ್ತ ಹೆಸ್ಕಾಂ ನೌಕರರಾಗಿದ್ದು, ಹಳೆ ಪಿ.ಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ ನಡೆದ ಹೋರಿ ಬೆದರಿಸುವ ಸ್ಪರ್ಧೆಯ ಎತ್ತು ತಿವಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ ರೀತಿಯಲ್ಲಿ, ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ನಡೆದ ಎತ್ತು ಮೆರವಣಿಗೆಯ ವೇಳೆ, ಒಂದು ಎತ್ತು ಬೆದರಿ ಓಡಿಬಂದು ಘನಿಸಾಬ ಮಹಮ್ಮದ ಹುಸೇನ ಬಂಕಾಪೂರ (75) ಎಂಬವರ ಮೇಲೆ ದಾಳಿ ಮಾಡಿದೆ. ಕುತ್ತಿಗೆ ಮತ್ತು ಎದೆಗೆ ತಿವಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಇದನ್ನು ನೋಡಿ : ಹಾವೇರಿಯಲ್ಲಿ ದನ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಮೂವರು ಸಾವು

ಇನ್ನು ಜಿಲ್ಲೆಯ ಇತರ ಭಾಗಗಳಲ್ಲಿಯೂ ಹೋರಿ ಓಟದ ಸಂದರ್ಭ ಹಲವು ಜನರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ವರದಿಯಾಗಿದೆ. ಪೊಲೀಸರು ಪ್ರಕರಣಗಳನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇನ್ನು ಸ್ಥಳೀಯರು ಈ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಹೋರಿ ಹಬ್ಬಗಳ ಆಯೋಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಇದನ್ನು ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ನಿರೀಕ್ಷೆ




