Kalburgi : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಇನ್ನು ಈ ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ.
ಸಿಲಿಂಡರ್ ಸೋರಿಕೆಯ ವಾಸನೆ, ಕ್ಷಣಾರ್ಧದಲ್ಲಿ ಸ್ಫೋಟ
ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯ ತೀವ್ರ ವಾಸನೆ ಬರುತ್ತಿದ್ದ ವೇಳೆ, ಮನೆಯಲ್ಲಿದ್ದ ಕುಟುಂಬದ ನಾಲ್ವರು ಸದಸ್ಯರು ತಕ್ಷಣ ಮನೆಯಿಂದ ಹೊರ ಬಂದಿದ್ದಾರೆ. ಅವರು ಹೊರಬಂದ ತಕ್ಷಣವೇ ಭಾರಿ ಸ್ಫೋಟ ಸಂಭವಿಸಿದೆ. ಇನ್ನು ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನು ಓದಿ : ಕೆರೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆ ಸೇರಿ ಮೂವರ ಸಾವು
ಮನೆಯಲ್ಲಿದ್ದ ಸಾವಿರಾರು ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಹಾಗೂ ಇತರ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸಂಪೂರ್ಣ ಮನೆ ಭಸ್ಮವಾಗಿರುವುದರಿಂದ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ಘಟನೆ ನಂತರ, ಪೀಡಿತ ಕುಟುಂಬದವರು ಜಿಲ್ಲಾಡಳಿತದೊಂದಿಗೆ ಸಂಪರ್ಕಿಸಿ ತಕ್ಷಣ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆ
ಸಿಲಿಂಡರ್ ಸ್ಫೋಟದಿಂದ ಬೆಂಕಿ ಪಸರಿಸಿದ ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ನಷ್ಟವನ್ನು ತಪ್ಪಿಸಿದ್ದಾರೆ. ಇನ್ನು ಈ ಕುರಿತು ಸುಲೇಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಸಿಲಿಂಡರ್ ಸ್ಫೋಟ; ಚಿನ್ನಾಭರಣ, ನಗದು ಭಸ್ಮ




