Mandya : ಪ್ರೀತಿ ತಂದ ಫಜೀತಿ! ಪ್ರೇಮ ವಿವಾಹದಿಂದ ಹೊತ್ತಿ ಉರಿದ ಯುವಕನ ಮನೆ! ಅಷ್ಟಕ್ಕೂ ಆಗಿದ್ದೇನು?

ಪ್ರೀತಿಯಿಂದ ಆಗುವ ಅನಾಹುತಗಳು ಒಂದೊಂದಲ್ಲ. ಈ ಪ್ರೀತಿಯಿಂದ ಬರುವ ಸಮಸ್ಯೆಗಳು ಹೇಳತೀರದು. ಅಂಥದ್ದೇ ಒಂದು ಘಟನೆಗೆ ಮಂಡ್ಯ ಜಿಲ್ಲೆ ಸಾಕ್ಷಿಯಾಗಿದೆ. ಯುವಕ ಮತ್ತು ಯುವತಿಯ ಪ್ರೀತಿ, ಪ್ರೇಮಕ್ಕೆ ಹುಡುಗನ ಮನೆ ಧಗಧಗ ಹೊತ್ತಿ ಉರಿದಿದೆ. ಮಂಡ್ಯದ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಪ್ರೇಮ ವಿವಾಹದ ಹಿನ್ನೆಲೆ ಯುವಕನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಪ್ರೀತಿ ವಿಚಾರಕ್ಕೆ ಮನೆಗೆ ಬೆಂಕಿ
ಗ್ರಾಮದ ವಿನೋದ್ ಮತ್ತು ಪಕ್ಕದ ಮನೆಯ ಯುವತಿ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬದವರ ವಿರೋಧದ ನಡುವೆಯೂ ಫೆಬ್ರವರಿ 12ರಂದು ಮದುವೆಯಾಗಿದ್ದರು. ಈ ವಿಷಯಕ್ಕೆ ಆಕ್ರೋಶಗೊಂಡ ಯುವತಿಯ ತಂದೆ ಚನ್ನೇಗೌಡ ಶನಿವಾರ ಬೆಳಿಗ್ಗೆ ವಿನೋದ್ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : Kamalakar Bhat ಮತ್ತೊಂದು ಕರ್ಮಕಾಂಡ ಬಯಲು – ಪೋಕ್ಸೋ ಪ್ರಕರಣ ದಾಖಲು

ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮ
ಘಟನೆ ವೇಳೆ ಮನೆಯಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು, ಬಟ್ಟೆಗಳು ಮತ್ತು ಅಡುಗೆ ಸಾಮಗ್ರಿಗಳು ನಾಶವಾಗಿವೆ.
ಬೆಂಕಿ ಹಚ್ಚಿದವನಿಗೂ ಗಾಯ – Mandya
ಇನ್ನು ಬೆಂಕಿ ಹಚ್ಚುವ ವೇಳೆ ಚನ್ನೇಗೌಡನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶ – Mandya
ವಿನೋದ್ ಕುಟುಂಬಸ್ಥರು ಮನೆಯಲ್ಲಿ ಸುಮಾರು 10 ಲಕ್ಷ ರೂಪಾಯಿ ನಗದು ಹಾಗೂ 250 ಗ್ರಾಂ ಚಿನ್ನ ಇತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇನ್ನು ಈ ಬಗ್ಗೆ ಮದ್ದೂರುಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಪೊಲೀಸರ ಭರ್ಜರಿ ಕಾರ್ಯಾಚರಣೆ ಕಳ್ಳನನ್ನು ಹೆಡೆಮುರಿ ಕಟ್ಟಿದ ಖಾಕಿ




