SSLC ಪರೀಕ್ಷೆಗಳು ಮಾರ್ಚ್ 18ರಿಂದ – ಮೇ 8ಕ್ಕೆ ಫಲಿತಾಂಶ ನಿರೀಕ್ಷೆ, ಬಿಗಿ ಭದ್ರತಾ ವ್ಯವಸ್ಥೆ.

ಕರ್ನಾಟಕ SSLC ಪರೀಕ್ಷಾ ಪ್ರಕ್ರಿಯೆ ಮಾರ್ಚ್ 18ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿದ್ದು, ಏಪ್ರಿಲ್ 2ರಂದು ಮುಕ್ತಾಯಗೊಳ್ಳಲಿದೆ. ಪರೀಕ್ಷೆಗಳ ಫಲಿತಾಂಶಗಳನ್ನು ಮೇ 8ರೊಳಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಎಸ್ಎಸ್ಎಲ್ಸಿ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿ ಹಾಗೂ ವ್ಯವಸ್ಥೆಗಳನ್ನು ಪ್ರಕಟಿಸಿದ್ದು, ಈ ವರ್ಷ 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ. ಪರೀಕ್ಷೆಗಳು ಸುಗಮ, ಪಾರದರ್ಶಕ ಮತ್ತು ನ್ಯಾಯಯುತವಾಗಿ ನಡೆಯುವಂತೆ ಶಿಕ್ಷಣ ಇಲಾಖೆ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ಏಪ್ರಿಲ್ 2 ರಂದು ಮುಕ್ತಾಯ
ಪರೀಕ್ಷೆಯು ಮಾರ್ಚ್ 18 ರಂದು ಪ್ರಥಮ ಭಾಷಾ ಪತ್ರಿಕೆಗಳೊಂದಿಗೆ ಪ್ರಾರಂಭವಾಗಲಿದ್ದು, ಏಪ್ರಿಲ್ 2 ರಂದು ಸಮಾಜ ವಿಜ್ಞಾನ ಪತ್ರಿಕೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಯಾವುದೇ ರೀತಿಯ ದುಷ್ಕೃತ್ಯವನ್ನು ತಡೆಗಟ್ಟಲು ಪ್ರಶ್ನೆಪತ್ರಿಕೆ ವಿತರಣೆ, ಕಣ್ಗಾವಲು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ Bomb Threat
CCTV ಕ್ಯಾಮೆರಾ ಕಡ್ಡಾಯ
ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ CCTV ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಅವಧಿಯುದ್ದಕ್ಕೂ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಯಲಿದ್ದು, ವಿಶೇಷ ತಂಡಗಳು ನಿರಂತರ ನಿಗಾ ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ನಲ್ಲೇ ಮೌಲ್ಯಮಾಪನ
ಇನ್ನು ಪರೀಕ್ಷೆಗಳು ಮುಗಿದ ತಕ್ಷಣ ಏಪ್ರಿಲ್ನಲ್ಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಲಿದ್ದು, ಉತ್ತರಪತ್ರಿಕೆಗಳನ್ನು ವಿಳಂಬವಿಲ್ಲದೆ ಪರಿಶೀಲಿಸಿ ನಿಗದಿತ ಅವಧಿಯಲ್ಲೇ ಫಲಿತಾಂಶ ಪ್ರಕಟಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಎಲೆಕ್ಟ್ರಾನಿಕ್ ಸಾಧನಗಳು ನಿಷೇಧ
ಇದೇ ವೇಳೆ ಪರೀಕ್ಷಾ ಕೇಂದ್ರಗಳೊಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಷೇಧಿತ ವಸ್ತುಗಳನ್ನು ಹೊಂದಿರುವ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಸೂಚನೆಗಳನ್ನು ಎಚ್ಚರಿಕೆಯಿಂದ ಪಾಲಿಸಬೇಕು, ಮುಂಚಿತವಾಗಿ ಕೇಂದ್ರಗಳನ್ನು ತಲುಪಬೇಕು ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳು ಸುಗಮವಾಗಿ ನಡೆಯುವಂತೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನು ನೋಡಿ : GOLD RATE HIGH | ಜನರಿಗೆ ಮತ್ತೆ ಶಾಕ್ ಕೊಟ್ಟ ಚಿನ್ನ ಈಗ ಚಿನ್ನ ಕೊಳ್ಳೋದಾ.. ಬೇಡ್ವಾ




