Chikkamagaluru : ಚಾರ್ಮಾಡಿ ಘಾಟ್ (Charmadi Ghat) ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಬೆಂಕಿ (Wildfire) ಕಾಣಿಸಿಕೊಂಡಿದೆ. ಪರಿಣಾಮ ಸುಮಾರು ಒಂದೂವರೆ-ಎರಡು ಕಿ.ಮೀ. ಪಶ್ಚಿಮ ಘಟ್ಟಗಳ ತಪ್ಪಲಿನ ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ.

Chikkamagaluru : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಪಶ್ಚಿಮ ಘಟ್ಟಗಳ ತಪ್ಪಲಿನ ಅಪರೂಪದ ಹುಲ್ಲುಗಾವಲು ಪ್ರದೇಶಕ್ಕೆ ಗಂಭೀರ ಹಾನಿಯಾಗಿದೆ.
ಮೂಡಿಗೆರೆ ಅರಣ್ಯ ವಲಯದಲ್ಲಿ ಬೆಂಕಿಯ ರೌದ್ರಾವತಾರ
ಮೂಡಿಗೆರೆ ಅರಣ್ಯ ವಲಯದೊಳಗೆ ಸುಮಾರು ಒಂದೂವರೆ ರಿಂದ ಎರಡು ಕಿಲೋಮೀಟರ್ ವಿಸ್ತೀರ್ಣದ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಸಂಪೂರ್ಣವಾಗಿ ಧಗಧಗನೆ ಹೊತ್ತಿ ಉರಿದಿದೆ.
ಗಾಳಿಯ ವೇಗ ಹೆಚ್ಚಿರುವುದರಿಂದ ಬೆಂಕಿಯ ಕೆನ್ನಾಲಿಗೆಗಳು ವೇಗವಾಗಿ ಹರಡುತ್ತಿದ್ದು, ಅರಣ್ಯ ಸಂಪತ್ತಿಗೆ ತೀವ್ರ ಹಾನಿಯಾಗುವ ಆತಂಕ ಎದುರಾಗಿದೆ. ಚಾರ್ಮಾಡಿ ಘಾಟಿಯ ರಸ್ತೆಯ ಪಕ್ಕದಲ್ಲೇ ಬೆಂಕಿ ಕಾಣಿಸಿಕೊಂಡಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ವ್ಯಕ್ತಿಯನ್ನ ಕೊಂದು ಪೀಸ್ ಪೀಸ್ ಮಾಡಿ ಬಾವಿಗೆ ಎಸೆದ ದುಷ್ಕರ್ಮಿಗಳು.!

ಪಶ್ಚಿಮ ಘಟ್ಟಗಳ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಕಾಡ್ಗಿಚ್ಚಿಗೆ ಆಹುತಿ
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯವಾದ ಬೆಂಕಿ ರೇಖೆಗಳನ್ನು ನಿರ್ಮಿಸದೆ ನಿರ್ಲಕ್ಷ ವಹಿಸಿದ್ದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯನ್ನು ನಿರಂತರವಾಗಿ ನಿಗಾವಹಿಸಲಾಗುತ್ತಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ತೀವ್ರ ಪ್ರಯತ್ನಗಳು ಮುಂದುವರಿದಿವೆ.
ಇನ್ನೊಂದೆಡೆ, ಚಾರ್ಮಾಡಿ ಘಾಟಿಯ ರಸ್ತೆ ಉದ್ದಕ್ಕೂ ತಕ್ಷಣವೇ ಬೆಂಕಿ ರೇಖೆಗಳನ್ನು ನಿರ್ಮಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಕಾಡ್ಗಿಚ್ಚಿನಿಂದ ರಕ್ಷಿಸಬಹುದೆಂಬುದು ಸ್ಥಳೀಯರ ವಾದವಾಗಿದೆ.
MUST WATCH : ಸಿದ್ದಗಂಗಾ ಮಠದ ಜಾತ್ರೆಗೆ ದಿನಗಣನೆ ಭಿಕ್ಷಾಟನೆ ಮಾಡಿದ ಸಿದ್ದಲಿಂಗ ಶ್ರೀಗಳು




