ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ನಡೆಯುತ್ತಿದ್ದರೂ ಸಚಿವರುಗಳು ಸದನಕ್ಕೆ ಹಾಜರಾಗದೆ ಗೈರಾಗುತ್ತಿರುವುದು CM ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ನಡೆಯುತ್ತಿದ್ದರೂ ಸಚಿವರುಗಳು ಸದನಕ್ಕೆ ಹಾಜರಾಗದೆ ಗೈರಾಗುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಪತ್ರ ಬರೆದಿರುವ ಸಿಎಂ, ಕರ್ತವ್ಯ ಲೋಪದ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರುಗಳೇ ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಧಿವೇಶನದ ವೇಳೆ ಸಚಿವರ ಗೈರುಹಾಜರಿಯಿಂದಾಗಿ ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ದೊರಕಿದೆ. ಸದನದಲ್ಲಿ ಸಚಿವರ ಅನುಪಸ್ಥಿತಿಯನ್ನು ಕಂಡು ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತಿದೆ.
ಇದನ್ನು ಓದಿ : Kadaba ದಲ್ಲಿ ತಂದೆಗೆ ಚಾಕು ಇರಿದು ಬಳಿಕ ಅಪ್ರಾಪ್ತ ಮಗ ಆತ್ಮಹತ್ಯೆ..!!

CM ಬರೆದ ಪತ್ರದಲ್ಲಿ ಏನಿದೆ..?
ಸಚಿವರಿಗೆ ಬರೆದಿರುವ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.
- ಕಡ್ಡಾಯ ಹಾಜರಾತಿ: ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಕಾರ್ಯಕಲಾಪಗಳ ವೇಳೆ ತಮಗೆ ವಹಿಸಲಾದ ಸದನದಲ್ಲಿ ಸಚಿವರು ಖುದ್ದಾಗಿ ಹಾಜರಿರಬೇಕು.
- ಸಭೆ–ಸಮಾರಂಭಗಳಿಗೆ ಬ್ರೇಕ್: ಅಧಿವೇಶನ ನಡೆಯುವ ಸಮಯದಲ್ಲಿ ಯಾವುದೇ ಖಾಸಗಿ ಸಭೆಗಳು ಅಥವಾ ಸಮಾರಂಭಗಳನ್ನು ಆಯೋಜಿಸಬಾರದು. ಸದನದಲ್ಲಿರುವುದೇ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮುಖ್ಯ.
- ತಪ್ಪು ಸಂದೇಶ ತಪ್ಪಿಸಿ: ಸದನಕ್ಕೆ ಗೈರಾಗುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಲು ಕಾರಣವಾಗುತ್ತದೆ. ಇದು ಆಡಳಿತದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ.
- ಸದನದ ಘನತೆ ಕಾಪಾಡಿ: ಪ್ರತಿದಿನವೂ ಅಧಿವೇಶನದಲ್ಲಿ ಪಾಲ್ಗೊಳ್ಳುವ ಮೂಲಕ ಸದನದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಬೇಕು ಎಂದು ಸಿಎಂ ಸೂಚಿಸಿದ್ದಾರೆ.
ವಿಪಕ್ಷಗಳ ಆಕ್ರೋಶಕ್ಕೆ ಸಿಎಂ ಸ್ಪಂದನೆ?
ಅಧಿವೇಶನದ ಪ್ರಶ್ನೋತ್ತರ ಅವಧಿ ಹಾಗೂ ಪ್ರಮುಖ ಚರ್ಚೆಗಳ ವೇಳೆ ಸಂಬಂಧಪಟ್ಟ ಸಚಿವರು ಸದನದಲ್ಲಿಲ್ಲ ಎಂಬ ಆರೋಪಗಳು ಪದೇಪದೆ ಕೇಳಿಬರುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ, ಸಚಿವರಿಗೆ ಎಚ್ಚರಿಕೆ ನೀಡಿ ತಮ್ಮ ಸಂಪುಟದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, CM ಬರೆದ ಪತ್ರದ ನಂತರವಾದರೂ ಸಚಿವರು ಅಧಿವೇಶನಕ್ಕೆ ಹಾಜರಾಗುತ್ತಾರಾ? ಅಥವಾ ಗೈರುಹಾಜರಿ ಮುಂದುವರಿಯುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ನೋಡಿ : ARKESHTRA | ಅಶ್ಲೀಲ ಆರ್ಕೆಸ್ಟ್ರಾಗಳ ವಿರುದ್ಧ ಹೋರಾಟಗಳು..! – ಅಶ್ಲೀಲ ನೃತ್ಯಗಳಿಗೆ ಬ್ರೇಕ್




