ತಿರುಮಲಕ್ಕೆ ಹೋಗುವ ಭಕ್ತರಿಗೆ TTD ಹೊಸ ನಿಯಮ ಜಾರಿ!

ತಿರುಮಲಕ್ಕೆ ಹೋಗುವ ಶ್ರೀವಾರಿ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಪ್ರಮುಖ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ತಿರುಮಲ ಘಾಟ್ ರಸ್ತೆ ಹಾಗೂ ಬೆಟ್ಟದ ಮೇಲಿನ ರಸ್ತೆಗಳಲ್ಲಿ ಅನಗತ್ಯವಾಗಿ ಹಾರ್ನ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
“ಸೈಲೆಂಟ್ ತಿರುಮಲ ಇನಿಶಿಯೇಟಿವ್”
ತಿರುಮಲದ ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡುವ ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಟಿಟಿಡಿ “ಸೈಲೆಂಟ್ ತಿರುಮಲ ಇನಿಶಿಯೇಟಿವ್” ಎಂಬ ವಿಶೇಷ ಅಭಿಯಾನ ಆರಂಭಿಸಿದೆ.
ತಿರುಮಲದಲ್ಲಿ ಗೋವಿಂದ ನಾಮಸ್ಮರಣೆ ಮಾತ್ರ ಕೇಳಿಬರಬೇಕು ಎಂಬ ಆಶಯದೊಂದಿಗೆ ಈ ನಿಯಮ ಜಾರಿಗೆ ತರಲಾಗಿದೆ.

ಹಾರ್ನ್ ಮಾಡಿದರೆ ಬೀಳುತ್ತೆ ದಂಡ!
ಭಕ್ತರಿಗೆ ಮಾಹಿತಿ ನೀಡುವ ಸಲುವಾಗಿ ತಿರುಮಲಕ್ಕೆ ಹೋಗುವ ಪ್ರಮುಖ ಮಾರ್ಗಗಳಲ್ಲಿ ಹಾಗೂ ಬೆಟ್ಟದ ಮೇಲಿನ ರಸ್ತೆಗಳಲ್ಲಿ ವಿಶೇಷ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.
ವಾಹನ ಚಾಲಕರು ಯಾವುದೇ ಕಾರಣಕ್ಕೂ ಹಾರ್ನ್ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
VIP ವಾಹನಗಳಿಗೂ ನಿಯಮ ಅನ್ವಯ
ಈ ನಿಯಮ ಸಾಮಾನ್ಯ ಭಕ್ತರ ವಾಹನಗಳಿಗೆ ಮಾತ್ರವಲ್ಲ, ವಿಐಪಿ ವಾಹನಗಳಿಗೂ ಅನ್ವಯವಾಗಲಿದೆ. ಸೈರನ್ ಅಳವಡಿಸಿರುವ ಸರ್ಕಾರಿ ಹಾಗೂ ವಿಐಪಿ ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹಾರ್ನ್ ಅಥವಾ ಸೈರನ್ ಬಳಸಲು ಅವಕಾಶವಿದ್ದು, ಉಳಿದ ಸಂದರ್ಭಗಳಲ್ಲಿ ಕಡ್ಡಾಯವಾಗಿ ಹಾರ್ನ್ ಆಫ್ ಮಾಡಿರಬೇಕು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ – ಲಡ್ಡು ವಿಚಾರದಲ್ಲಿ ಬಿಗ್ ಅಪ್ಡೇಟ್ಸ್..!

ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಶಬ್ದ ಮಾಲಿನ್ಯ:
ಇತ್ತೀಚಿನ ವರ್ಷಗಳಲ್ಲಿ ತಿರುಮಲಕ್ಕೆ ಆಗಮಿಸುವ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ಪ್ರತಿದಿನ ಸುಮಾರು 8 ಸಾವಿರ ವಾಹನಗಳು ಬರುತ್ತಿದ್ದರೆ, ಇದೀಗ ದಿನಕ್ಕೆ 10 ಸಾವಿರಕ್ಕೂ ಹೆಚ್ಚು ವಾಹನಗಳು ಬೆಟ್ಟ ಏರುತ್ತಿವೆ.
ವಾರಾಂತ್ಯ, ಹಬ್ಬ ಹಾಗೂ ರಜಾ ದಿನಗಳಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಶಬ್ದ ಮಾಲಿನ್ಯವೂ ಹೆಚ್ಚಾಗುತ್ತಿದೆ.
ತಿರುಮಲಕ್ಕೆ ಹೋಗೋ ಮುನ್ನ ಈ ನಿಯಮ ನೆನಪಿನಲ್ಲಿಟ್ಟುಕೊಳ್ಳಿ
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವನ್ನು ನಿಶ್ಯಬ್ದ ವಲಯವಾಗಿ ಪರಿಗಣಿಸಲಾಗಿದ್ದು, ಹಗಲಿನಲ್ಲಿ 50 ಡೆಸಿಬಲ್ ಹಾಗೂ ರಾತ್ರಿ 40 ಡೆಸಿಬಲ್ಗಿಂತ ಹೆಚ್ಚು ಶಬ್ದ ಉಂಟುಮಾಡುವಂತಿಲ್ಲ. ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹಾರ್ನ್ ಅಥವಾ ಸೈರನ್ ಬಳಸಿದರೆ ಟಿಟಿಡಿ ಜಾಗೃತ ದಳ ಹಾಗೂ ಸಂಚಾರಿ ಪೊಲೀಸರು ದಂಡ ವಿಧಿಸಲಿದ್ದಾರೆ. ಆದ್ದರಿಂದ, ತಿರುಮಲಕ್ಕೆ ಪ್ರಯಾಣಿಸುವ ಮುನ್ನ ಈ ನಿಯಮವನ್ನು ನೆನಪಿನಲ್ಲಿಟ್ಟುಕೊಳ್ಳಿ.

ಇದನ್ನು ನೋಡಿ : ಸೈಜ್ ಕಲ್ಲು ಎತ್ತಿಹಾಕಿ ಅಜ್ಜಿಯ ಭೀಕರ ಕೊ* – ಸಾಕಿ ಸಲುಹಿದ ಅಜ್ಜಿಯನ್ನೇ ಕೊಂದ ಪಾಪಿ




