Karnataka Census : ಭಾರತ ಜನಗಣತಿ-2027ರ ಪೂರ್ವಸಿದ್ಧತೆಗೆ ಕರ್ನಾಟಕ ಸರ್ಕಾರ ಜಿಲ್ಲೆಗಳು ಹಾಗೂ ನಗರ ಪಾಲಿಕೆಗಳಿಗೆ ₹134.14 ಕೋಟಿ ಅನುದಾನ ಬಿಡುಗಡೆ ಮಾಡಿದೆ.

Karnataka Census : ಭಾರತ ಜನಗಣತಿ-2027ರ ಪೂರ್ವಸಿದ್ಧತೆಗಾಗಿ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದ ಜಿಲ್ಲೆಗಳು ಹಾಗೂ ವಿವಿಧ ನಗರ ಪಾಲಿಕೆಗಳಿಗೆ ಒಟ್ಟು ₹134.14 ಕೋಟಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಈ ಅನುದಾನವನ್ನು ಜನಗಣತಿ ಕಾರ್ಯಗಳನ್ನು ಸುಗಮವಾಗಿ ನಡೆಸಲು ಬಳಸಲಾಗುತ್ತದೆ.

ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಜನಗಣತಿ-2027ರ ಪೂರ್ವಸಿದ್ಧತೆ, ಕ್ಷೇತ್ರಮಟ್ಟದ ಕಾರ್ಯಾಚರಣೆ ಹಾಗೂ ಆಡಳಿತಾತ್ಮಕ ಸಿದ್ಧತೆಗಳನ್ನು ವೇಗಗೊಳಿಸುವ ಉದ್ದೇಶದಿಂದ ಈ ಅನುದಾನ ಬಿಡುಗಡೆ ಮಾಡಲಾಗಿದೆ.

ಆದೇಶದ ಪ್ರಕಾರ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಟ್ಟು ₹501.44 ಕೋಟಿ ಅನುದಾನ ಲಭ್ಯವಾಗಿದ್ದು, ಮೊದಲ ಹಂತದಲ್ಲಿ ₹135.74 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ರಾಜ್ಯ ನೋಡಲ್ ಇಲಾಖೆಯ ಮೀಸಲು ನಿಧಿಗಾಗಿ ₹1.60 ಕೋಟಿ ಕಾಯ್ದಿರಿಸಿ, ಉಳಿದ ₹134.14 ಕೋಟಿ ಅನ್ನು ಜಿಲ್ಲೆಗಳು ಹಾಗೂ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.

ಬಿಡುಗಡೆಯಾದ ಅನುದಾನವನ್ನು ಜನಗಣತಿ-2027ರ ಪೂರ್ವಸಿದ್ಧತೆ, ಸಿಬ್ಬಂದಿ ತರಬೇತಿ, ಆಡಳಿತಾತ್ಮಕ ವೆಚ್ಚ ಹಾಗೂ ಕ್ಷೇತ್ರಮಟ್ಟದ ವಿವಿಧ ಅಗತ್ಯ ಕಾರ್ಯಗಳಿಗೆ ಬಳಸುವಂತೆ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.




