ವಿಶಾಖಪಟ್ಟಣದ ಉಕ್ಕು ಸ್ಥಾವರ ದುರಂತ – ಮೃತ ಕಾರ್ಮಿಕರ ಕುಟುಂಬಕ್ಕೆ 25 ಲಕ್ಷ ಪರಿಹಾರ: HDK

ವಿಶಾಖಪಟ್ಟಣ ಇಲ್ಲಿನ ಉಕ್ಕು ಸ್ಥಾವರದಲ್ಲಿ ಭಾರೀ ಪ್ರಮಾಣದ ಕರಗಿದ ಲೋಹ ಹರಿದು ಸಾವನ್ನಪ್ಪಿದ್ದ 8 ಮಂದಿ ಕಾರ್ಮಿಕರ ಕುಟುಂಬಸ್ಥರಿಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು
ನೆನ್ನೆ ತಡರಾತ್ರಿ ವಿಶಾಖಪಟ್ಟಣ ಉಕ್ಕು ಸ್ಥಾವರದಲ್ಲಿ ಟನ್ಗಟ್ಟಲೆ ಕರಗಿದ ಲೋಹವಿದ್ದ ಬೃಹತ್ ಗಾತ್ರದ ಬಕೆಟ್ ಉರುಳಿ ಬಿದ್ದ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ದುರಂತದಲ್ಲಿ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರಾತ್ರಿ 1:30ರ ಸುಮಾರಿಗೆ ಘಟನಾ ಸ್ಥಳಕ್ಕೆ ಧಾವಿಸಿದ ಸಚಿವ ಕುಮಾರಸ್ವಾಮಿ, ಕಾರ್ಖಾನೆಯ ಉಕ್ಕು ಕರಗುವ ಕೇಂದ್ರ ಸಂಖ್ಯೆ-1ರಲ್ಲಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಘಟನೆ ಕುರಿತು ವಿವರವಾದ ಮಾಹಿತಿ ಪಡೆದರು.

ಮೃತರ ಕುಟುಂಬಗಳಿಗೆ ₹25 ಲಕ್ಷ, ಗಾಯಾಳುಗಳಿಗೆ ₹10 ಲಕ್ಷ
ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ ₹25 ಲಕ್ಷ ಹಾಗೂ ಗಾಯಾಳುಗಳಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಸಚಿವರು ಘೋಷಿಸಿದರು. ಜೊತೆಗೆ, ಮೃತ ಕಾರ್ಮಿಕರ ಕುಟುಂಬದ ಅರ್ಹ ಸದಸ್ಯರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆ ಭರಿಸಲಿದ್ದು, ಮೃತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೂ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ದುರಂತದ ಕಾರಣಕ್ಕೆ ತನಿಖೆ ಆದೇಶ
“ಈ ದುರ್ಘಟನೆಯಿಂದ ನನಗೆ ತೀವ್ರ ಆಘಾತವಾಗಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ದುರಂತದ ನಿಖರ ಕಾರಣ ಪತ್ತೆಹಚ್ಚಲು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ,” ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಧಾನಿ ಮೋದಿ ಪರಿಹಾರ ಘೋಷಣೆ
ಈಗಾಗಲೇ ಪ್ರಧಾನ ಮಂತ್ರಿ ಮೋದಿಯವರು ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಇದನ್ನು ಓದಿ : DKS Vs HDK ಮೊದಲ ರಾಜಕೀಯ ಹಣಾಹಣಿ .. ಗೆಲುವು ಯಾರಿಗೆ?

ಆಗಿದ್ದೇನು?
ಟನ್ಗಳಷ್ಟು ಕರಗಿದ ಲೋಹವಿದ್ದ ದೊಡ್ಡ ಗಾತ್ರದ ಬಕೆಟ್ ಉರುಳಿ ಬಿದ್ದಿದೆ. ಕರಗಿದ ಉಕ್ಕು ಕೆಳಗೆ ಬೀಳುವ ಕೆಲವೇ ಕ್ಷಣಗಳ ಮೊದಲು ಸ್ಫೋಟ ಸಂಭವಿಸಿದೆ. ಇದರಿಂದ ಸ್ಥಾವರದ ಉಕ್ಕಿನ ಕರಗುವ ಕೇಂದ್ರ ಸಂಖ್ಯೆ 1 ರಲ್ಲಿ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಕನಿಷ್ಠ ಆರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ನೋಡಿ : ಹಳೆ ದ್ವೇಷಕ್ಕೆ ಒಂದೇ ಗ್ರಾಮದವರ ನಡುವೆ ಮಾರಾಮಾರಿ – ದೊಣ್ಣೆಯಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದ GANG




