Rain Alert : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಕಾಡುತ್ತಿರುವ ಮಧ್ಯೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ.

Rain Alert : ಕಳೆದ ಕೆಲ ದಿನಗಳಿಂದ ತಾಪಮಾನ ಏರಿಕೆಯಿಂದ ಕಂಗೆಟ್ಟಿದ್ದ ರಾಜ್ಯದ ಹಲವು ಭಾಗಗಳಿಗೆ ಶನಿವಾರ ಮಳೆ ತಂಪು ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು, ಸಿಡಿಲು ಹಾಗೂ ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಭಾರಿ ಮಳೆಯಾಗುವ ಜಿಲ್ಲೆಗಳು
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮುಂದಿನ 24ರಿಂದ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳ ಹಲವೆಡೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.

ಹಗುರ ಮಳೆಯಾಗುವ ಜಿಲ್ಲೆಗಳು
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ 40ರಿಂದ 50 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳಲ್ಲೂ ಬಿರುಗಾಳಿಯೊಂದಿಗೆ ಹಗುರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನು ಓದಿ : ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ, 2026-27ರ ಮುಂಗಾರು ಹಂಗಾಮಿನಲ್ಲಿ 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿ ದ್ದರೂ, ಜುಲೈ ಎರಡನೇ ವಾರದ ವೇಳೆಗೆ ಕೇವಲ 40.68 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಇದು ಗುರಿಯ ಶೇ.48ರಷ್ಟು ಮಾತ್ರವಾಗಿದೆ.
ಶೇಕಡಾ 30ರಿಂದ 35 ಮಳೆಯ ಕೊರತೆ
ಈ ಬಾರಿ ಸುಮಾರು 30ರಿಂದ 35 ಶೇಕಡಾ ಮಳೆಯ ಕೊರತೆ ದಾಖಲಾಗಿದ್ದು, ರಾಜ್ಯದ 157ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದೆ.
ಇದರಿಂದ ಬರದ ಆತಂಕ ಮತ್ತಷ್ಟು ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರದ ನೆರವಿಗೆ ಮನವಿ ಮಾಡಿದೆ.

ಕರ್ನಾಟಕದ ಒಟ್ಟು ಭೌಗೋಳಿಕ ಪ್ರದೇಶದ ಶೇ.77ರಷ್ಟು ಭಾಗ ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶವಾಗಿದ್ದು, ಸುಮಾರು 84.79 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿ ಇದೆ.
ರಾಜ್ಯದ ಕೃಷಿ ಉತ್ಪಾದನೆ ಬಹುತೇಕ ಮುಂಗಾರು ಮಳೆಯನ್ನೇ ಅವಲಂಬಿಸಿರುವುದರಿಂದ, ಮಳೆ ಕೊರತೆಯು ಕೃಷಿ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನು ನೋಡಿ : ಬಾರದ ಲೋಕಕ್ಕೆ DEVEGOWDAರ ಪತ್ನಿ – CHANNAMMA ಅವರ ಅಂತ್ಯಕ್ರಿಯೆ ಎಲ್ಲಿ ಗೊತ್ತಾ?




