ಚಿಕ್ಕಬಳ್ಳಾಪುರ :
ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಪೆಟ್ರೋಲ್ ಬಂಕ್ ಕಚೇರಿಯಲ್ಲಿಯೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಸಮೀಪ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
ಮೈಲಪ್ಪನಹಳ್ಳಿ ಸಮೀಪ ಇರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಬಳ್ಳಾಪುರದ ಬಾಪೂಜಿ ನಗರದ ಯಶವಂತ್ ಮೃತ ಯುವಕ ಎಂದು ತಿಳಿದು ಬಂದಿದೆ. ಕಳೆದ ವಾರದ ಹಿಂದೆ ಕುಟುಂಬದಲ್ಲಿ ಭಿನ್ನಾಭಿಪ್ರಾಯದ ಸಮಸ್ಯೆಯಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಯುವಕ ಯಶವಂತ್ ತಲೆಕೆಡಿಸಿಕೊಳ್ಳದೆ, ತಂದೆತಾಯಿಗೆ ಬುದ್ದಿವಾದ ಹೇಳಿದ್ದ. ಆದರೆ ರಾತ್ರಿ ಕೆಲಸಕ್ಕೆಂದು ಬಂದು ಪೆಟ್ರೋಲ್ ಬಂಕ್ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಮಾಹಿತಿ ತಿಳಿಯುತ್ತಿದಂತೆ ಪೋಷಕರು ಹಾಗೂ ಕುಟುಂಬಸ್ಥರು ಪೆಟ್ರೋಲ್ ಬಂಕ್ ಬಳಿ ಜಮಾಯಿಸಿದ್ದು ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರೋ ಪೋಷಕರು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.