IPL 2025 : IPL 2025 ಟೂರ್ನಿಯ ಕ್ವಾಲಿಫೈಯರ್ 2 ಪಂದ್ಯಕ್ಕಾಗಿ ನರೇಂದ್ರ ಮೋದಿ ಸ್ಟೇಡಿಯಂ ಸಂಪೂರ್ಣ ಸಜ್ಜಾಗಿದೆ. ಇಂದು ನಡೆಯಲಿರುವ ಈ ಮಹತ್ವದ ಪಂದ್ಯವು ಮುಂಬೈ ಹಾಗೂ ಪಂಜಾಬ್ ತಂಡಗಳ ನಡುವೆ ‘ಡು ಆರ್ ಡೈ’ ತಿರುವು ಪಡೆದಿದ್ದು, ಗೆದ್ದ ತಂಡ ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ ಸಿಬಿ [RCB] ತಂಡದ ಜೊತೆ ಸೆಣೆಸಾಡಲಿದೆ.
ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೆ ಹವಾಮಾನ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ಅಹ್ಮದಾಬಾದ್ನಲ್ಲಿ ಇಂದು ಮಳೆ ಆಗುವ ಮುನ್ಸೂಚನೆ ನೀಡಲಾಗಿದೆ. ಇನ್ನು ಸ್ಟೇಡಿಯಂ ಸುತ್ತಲೂ ಮೋಡ ಮುಚ್ಚಿರುವ ವಾತಾವರಣವಿದೆ. ಹೀಗಾಗಿ ಮಳೆ ಪಂದ್ಯಕ್ಕೆ ಅಡ್ಡಿಯಾಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಮುಂಬೈ ಹಾಗೂ ಪಂಜಾಬ್ ತಂಡಗಳು ಟೂರ್ನಿಯಲ್ಲಿ ಸಮಾನ ಬಲದ ತಂಡಗಳಾಗಿದ್ದು, ಇಬ್ಬರು ಭರ್ಜರಿ ಪ್ರದರ್ಶನ ನೀಡುತ್ತಾ ಫೈನಲ್ ಪ್ರವೇಶಿಸಲು ಸಜ್ಜಾಗಿವೆ. ಒಂದು ವೇಳೆ ಮಳೆ ಬಂದರೆ ಪಂದ್ಯ ಸ್ಥಗಿತವಾದ್ರೆ, ಪಾಯಿಂಟ್ ಟೇಬಲ್ ಆಧಾರದ ಮೇಲೆ ಫೈನಲ್ ಪ್ರವೇಶದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಉಂಟಾಗಿದೆ.
ಮೋದಿ ಸ್ಟೇಡಿಯಂದಲ್ಲಿ ಈಗಾಗಲೇ ನೀರು ನಿಷ್ಕಾಷಣ ವ್ಯವಸ್ಥೆ, ಗ್ರೌಂಡ್ ಕವರ್ ವ್ಯವಸ್ಥೆ ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.