ದೇಶ :
ಭಾರತ ಮತ್ತು ಪಾಕ್ ನಡುವೆ ಯುದ್ಧ ತಲೆದೋರಿರುವ ಹಿನ್ನಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇತ್ತ ಜಮ್ಮು- ಕಾಶ್ಮೀರದಲ್ಲಿಯೂ ಬಿಗಿ ಭದ್ರತೆ ಏರ್ಪಾಡು ಮಾಡಲಾಗಿದೆ. ಇನ್ನು ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಸಮೀಪದ ಪ್ರದೇಶಗಳಲ್ಲಿ ಪಾಕ್ ಪಡೆಗಳು ನಡೆಸಿದ ಭಾರೀ ಶೆಲ್ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅವರ ಕುಟುಂಬದ ಇಬ್ಬರು ಸದಸ್ಯರು ಗಾಯಗೊಂಡಿದ್ದಾರೆ.
ಕದನ ವಿರಾಮ ಉಲ್ಲಂಘಿಸಿ ಪಾಕ್ ಗುರುವಾರ ರಾತ್ರಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿರುವ ನಾಗರೀಕ ಪ್ರದೇಶಗಳಲ್ಲಿ ಶೆಲ್ ದಾಳಿ ನಡೆಸಿದೆ. ಮೊಹ್ರಾ ಬಳಿ ಮಹಿಳೆ ಹಾಗೂ ಅವರ ಕುಟುಂಬ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅವರ ಕಾರಿನ ಮೇಲೆಯೇ ಶೆಲ್ ಬಿದ್ದು ಸ್ಫೋಟಗೊಂಡಿದೆ. ಪರಿಣಾಮ ಮೂವರು ಗಾಯಗೊಂಡಿದ್ದರು. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ನರ್ಗಿಸ್ ಬೇಗಂ ಎಂಬುವವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನವು ಸಿಲಿಕೋಟ್, ಬೋನಿಯಾರ್, ಕಮಲ್‌ಕೋಟ್, ಮೊಹ್ರಾ ಮತ್ತು ಜಿಂಗಲ್ ಸೇರಿದಂತೆ ಉರಿಯ ಹಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿ ಹಾನಿ ಮಾಡಿದೆ. ಇದರಿಂದ ಜನರು ಸ್ಥಳದಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕಾಯಿತು. ಈ ಆಕ್ರಮಣಕ್ಕೆ ಪ್ರತಿಕ್ರಿಯೆ ನೀಡಲಾಗುತ್ತೆ ಎಂದು ಭಾರತೀಯ ಸೇನೆ ಹೇಳಿದೆ.