ಪಾವಗಡ : ಸಿಡಿಪಿಓ ತಪ್ಪನ್ನ ಅಂಗನವಾಡಿ ಕಾರ್ಯಕರ್ತೆಯ ತಲೆಗೆ ಕಟ್ಟಲು ಪ್ಲಾನ್!

ಪಾವಗಡ : 

ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಮಕ್ಕಳು ಮತ್ತು ತಾಯಂದಿರ ಆರೋಗ್ಯ ವೃದ್ಧಿಗಾಗಿ ಪೂರಕ ಪೌಷ್ಠಿಕ ಆಹಾರವನ್ನು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡ್ತಿದೆ. ಆದರೆ ಅಧಿಕಾರಿಗಳ ಹಣದಾಸೆಯಿಂದ ಈ ಯೋಜನೆ ಫಲಾನುಭವಿಗಳಿಗೆ ತಲುಪದೇ ಅಧಿಕಾರಿಗಳ ಪಾಲಾಗ್ತಾ ಇದೆ. ನಿಮ್ಮ ಪ್ರಜಾಶಕ್ತಿ ಟಿವಿ ನಡೆಸಿದ್ದ ರಿಯಾಲಿಟಿ ಚೆಕ್‌ನಲ್ಲಿ ಅಧಿಕಾರಿಗಳ ಕಳ್ಳಾಟ ಬಯಲಾಗಿತ್ತು.

ಪಾವಗಡ ತಾಲೂಕಿನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸರಬರಾಜು ಮಾಡ್ತಿದ್ದ ಆಹಾರ ಪ್ಯಾಕೆಟ್‌ಗಳಲ್ಲಿ 100 ಗ್ರಾಂ ಕಡಿಮೆ ಇರೋದು ಪ್ರಜಾಶಕ್ತಿ ರಿಯಾಲಿಟಿ ಚೆಕ್‌ ವೇಳೆ ಬೆಳಕಿಗೆ ಬಂದಿತ್ತು. ಅಲ್ಲದೇ ತಾಲೂಕಿನ ಮದ್ದೆ ಗ್ರಾಮದ ಅಂಗನವಾಡಿ ಸಹಾಯಕಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಒಂದು ವರ್ಷದಿಂದ ಕೆಲಸಕ್ಕೆ ಗೈರಾಗಿದ್ದರೂ ಕೂಡ ಅವರ ಹೆಸರಿನಲ್ಲಿ ನಕಲಿ ಹಾಜರಾತಿ ಸೃಷ್ಟಿಸಿ ಆಕೆಗೆ ಒಂದು ವರ್ಷದ ಸಂಬಳ ನೀಡ್ತಿದ್ದ ವಿಚಾರ ಕೂಡ ಬೆಳಕಿಗೆ ಬಂದಿತ್ತು. ಇಷ್ಟಲ್ಲದೇ ಅಂಗನವಾಡಿಗೆ ನೀಡ್ತಿರೋ ಹೆಸರು ಕಾಳಿನಲ್ಲಿ ರಾಶಿ ರಾಶಿ ಹುಳುಗಳು ಇದ್ದದ್ದು ಕೂಡ ಕಂಡುಬಂದಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಮಾಡಿ ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಿತ್ತು. ಆದರೆ ಇಷ್ಟೆಲ್ಲಾ ಆದರೂ ಇವರ ವಿರುದ್ಧ ಯಾವುದೇ ಕ್ರಮವಾಗದೇ ಇರೋದು ಮೇಲಧಿಕಾರಿಗಳ ಮೇಲೆಯೂ ಹಲವು ಅನುಮಾನಗಳು ಮೂಡುವಂತೆ ಮಾಡಿದೆ.

ಇನ್ನು ಇದರಲ್ಲಿ ಪಾವಗಡ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿರೋ ಸುನೀತಾ ಅವರು ಕರ್ತವ್ಯ ಲೋಪ ಎಸಗಿದ್ದಲ್ಲದೇ ಅಧಿಕಾರ ದುರುಪಯೋಗ ಮಾಡಿಕೊಂಡಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಆದರೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಇವರ ವಿರುದ್ಧ ಯಾವುದೇ ಕ್ರಮ ಜರುಗಿಸೋಕೆ ಮುಂದಾಗ್ತಿಲ್ಲ. ಹೀಗಾಗಿ ಇದೆಲ್ಲದರ ಹಿಂದೆ ದೊಡ್ಡ ಜಾಲವೇ ಇದೆಯಾ ಅನ್ನೋ ಸಂಶಯ ಮೂಡ್ತಿದೆ.

ಇನ್ನು ಮದ್ದೆ ಗ್ರಾಮದ ಅಂಗನವಾಡಿ ಸಹಾಯಕಿ ರಾಜೀನಾಮೆ ನೀಡಿದ ಮೇಲೆಯೂ ಸಂಬಳ ಹಾಕಿರೋ ಪ್ರಕರಣವನ್ನು ಆ ಅಂಗನವಾಡಿ ಕಾರ್ಯಕರ್ತೆಯ ತಲೆಗೆ ಕಟ್ಟೋದಕ್ಕೆ ಅಧಿಕಾರಿಗಳು ಭಾರೀ ಕಸರತ್ತು ನಡೆಸುತ್ತಿದ್ದಾರಂತೆ. ಮದ್ದೆ ಗ್ರಾಮದಲ್ಲಿ ಸುಮಾರು 25 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ನಾಗಲಕ್ಷ್ಮಮ್ಮ ಎಂಬುವವರನ್ನು ಕಚೇರಿಗೆ ಕರೆಸಿ ಸಿಡಿಪಿಓ ಸುನೀತಾ, ಮೇಲ್ವಿಚಾರಕಿಯರಾದ ವಿಜಯಲಕ್ಷ್ಮಿ. ಮಮತಾ. ಜಯಲಕ್ಷ್ಮೀ ಎಂಬುವವರು ಒತ್ತಡ ಹಾಕುತ್ತಿದ್ದಾರಂತೆ. ಈ ಪ್ರಕರಣಗಳನ್ನು ಮುಚ್ಚಿ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರಂತೆ. ಹೀಗಾಗಿ ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಪಾವಗಡ ಸಿಡಿಪಿಓ ಕಚೇರಿಯಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ.

Author:

...
Sushmitha N

Copy Editor

prajashakthi tv

share
No Reviews