ತುಮಕೂರು : ಯುಜಿಡಿ ವಾಸನೆಯಲ್ಲೇ ಜನರ ವಾಸ | ಸಾವಿನ ಕೂಪವಾದ ನಜರಾಬಾದ್

ತುಮಕೂರು :

ತುಮಕೂರು ಈಗಾಗಲೇ ಸ್ಮಾರ್ಟ್ಸಿಟಿ ಎಂದೇ ಖ್ಯಾತಿಗಳಿಸಿದೆ. ಇಂತಹ ನಗರದಲ್ಲಿ ಸ್ಚಚ್ಛತೆ ಕಾಪಾಡುವುದು ಮಹಾನಗರ ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿ. ಜನರ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಅಧಿಕಾರಿಗಳು ವಾರ್ಡ್ಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ತಿದ್ದಾರೆ. ಆದರೆ ಇಂದಿಗೂ ಕೂಡ ಜನರ ಸಮಸ್ಯೆ ತಪ್ಪಿಲ್ಲ. ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಹೊಲಸು ನೀರಿನಿಂದ ತುಂಬಿರುವ ಚರಂಡಿಗಳ ದುರ್ನಾತಕ್ಕೆ ಜನರು ಹೈರಾಣಾಗುತ್ತಿದ್ದಾರೆ.

ಕಳೆದ 3 ದಿನಗಳಿಂದ ತುಮಕೂರಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮಳೆಯಿಂದಾಗಿ ಹಲವೆಡೆ ಅವಾಂತರ ಕೂಡ ಸೃಷ್ಠಿಯಾಗಿತ್ತು. ಇತ್ತ ಕೆಲವು ಏರಿಯಾಗಳಲ್ಲಿ ಚರಂಡಿ ನೀರು ಮುಂದೆ ಹೋಗದೆ ನಿಂತಲ್ಲಿಯೇ ನಿಂತಿದ್ದು, ಜನ ದುರ್ನಾತದಲ್ಲಿಯೇ ಬದುಕು ಕಳೆಯುವಂತಾಗಿದೆ. ತುಮಕೂರು ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗ್ತಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದೆ. ಕುಡಿಯುವ ನೀರಿನ ತೊಟ್ಟಿಗಳಿಗೆ ಕೊಳಚೆ ನೀರು ಸೇರಿತ್ತಿದೆ. ಹೊಲಸು ನೀರಿನ ವಾಸನೆಯಿಂದಾಗಿ ಜನ ಈಚೆ ಬರಲು ಆಗದೆ ಮನೆಯಲ್ಲಿಯೂ ಇರಲು ಆಗದೆ  ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುಮಕೂರಿನ ನಜರಾಬಾದ್‌ 1ನೇ ಅಡ್ಡ ರಸ್ತೆಯಲ್ಲಿ ಅಳವಡಿಸಿರೋ ಯುಜಿಡಿ ಪೈಪ್ ಗಳಿಂದ ನೀರು ರಸ್ತೆ ಮೇಲೆ ಹರಿದು ಬರ್ತಿದೆ. ಈ ಕೊಳಚೆ ನೀರಿನ ವಾಸನೆಯಿಂದ ಜನ ಹಲವು ಮಾರಾಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಎಷ್ಟೇ ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಅನ್ನುತ್ತಿಲ್ಲವಂತೆ.

ಕಳೆದ ನಾಲ್ಕೈದು ವರ್ಷಗಳಿಂದಲೂ ಯುಜಿಡಿ ಸಮಸ್ಯೆ ಇದ್ದು, ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲವಂತೆ. ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತಿರೋದರಿಂದ ಇಡೀ ಏರಿಯಾ ಗಬ್ಬೇದು ನಾರುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಯುಜಿಡಿ ಕೊಳಚೆ ನೀರು ಮನೆಯೊಳಗೆ ಹರಿದಿತ್ತು. ಆ ಸಮಯದಲ್ಲಿ ನಾವು ಮನೆಯಲ್ಲಿ ವಾಸ ಮಾಡಲು ಕಷ್ಟವಾಗ್ತಿದೆ ಎಂದು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು.

ಅಧಿಕಾರಿಗಳು ಕಂದಾಯ ಕಟ್ಟಿಸಿಕೊಳ್ಳಲು ಮಾತ್ರ ಬರ್ತಾರೆ. ನಮಗೆ ಯುಜಿಡಿ ಸಮಸ್ಯೆ ಅಂತ ಎನಾದರೂ ಕಾಲ್ಮಾಡಿದರೆ ಮಾತ್ರ ಸ್ಪಂದಿಸಲ್ಲ. ನಗರದಲ್ಲಿ 35 ವಾರ್ಡ್ಗಳಿವೆ ನೀವು ಕಾಲ್ಮಾಡಿದ ತಕ್ಷಣ ಗಾಡಿ ಕಳಿಸೋಕೆ ಆಗಲ್ಲ ಅಂತ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಅಂತ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಇನ್ನಾದರು ಮಹಾನಗರ ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಜರಾಬಾದ್ನಿವಾಸಿಗಳಿಗೆ ಮಾರಕವಾಗಿರುವ ಯುಜಿಡಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಇಲ್ಲವಾದಲ್ಲಿ ಇಲ್ಲಿನ ಜನರು ಡೆಂಗ್ಯೂ, ಮಲೇರಿಯದಂತಹ ಮಾರಕ ರೋಗಗಳಿಗೆ ತುತ್ತಾಗಿ ಸಾವು ನೋವು ಸಂಭವಿಸುವುದು ಗ್ಯಾರೆಂಟಿ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.

Author:

...
Sushmitha N

Copy Editor

prajashakthi tv

share
No Reviews