UTTARA PRADESH: ತಂದೆಯೊಂದಿಗೆ ಜಗಳವಾಡಿದ ಪೆಟ್ರೋಲ್ ಬಂಕ್ ಉದ್ಯೋಗಿಗೆ ಯುವತಿಯು ಎದೆಗೆ ಗನ್ ಇಟ್ಟು ಬೆದರಿಕೆ ಹಾಕಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ದು ಮಾಡ್ತಿದೆ. ಈ ಘಟನೆಯು ಹರ್ದೋಯ್ ಜಿಲ್ಲೆಯ ಸ್ಯಾಂಡಿ ರಸ್ತೆಯ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಸಿಎನ್‌ಜಿ ಭರ್ತಿ ಮಾಡುವ ವೇಳೆ ಬಂಕ್ ಸಿಬ್ಬಂದಿ ಗಾಡಿಯಿಂದ ಕೆಳಗಿಳಿಯಲು ಪ್ರಯಾಣಿಕರನ್ನು ಕೇಳಿದ್ದಾನೆ. ಈ ವೇಳೆ ಉದ್ಯೋಗಿ ರಜನೀಶ್ ಹಾಗೂ ಯುವತಿಯ ತಂದೆಯ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಕಾರಿನಿಂದ ಇಳಿದ ಯುವತಿ, ತನ್ನ ಕೈಯಿಂದ ಗನ್ ತೆಗೆದು ಉದ್ಯೋಗಿಯ ಎದೆಗೆ ಇಟ್ಟಿದ್ದಾಳೆ.
ಈ ಘಟನೆಯ ಸಂಪೂರ್ಣ ದೃಶ್ಯಗಳು ಬಂಕ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸಾರ್ವಜನಿಕರು ಯುವತಿಯ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಪೆಟ್ರೋಲ್ ಬಂಕ್‌ನಂತಹ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಹತ್ಯೆ ಬೆದರಿಕೆಯ ವರ್ತನೆ ಹೇಗೆ ಸಾಧ್ಯ? ಯುವತಿಗೆ ಗನ್ ಇರಲು ಅನುಮತಿ ಯಾರಿಂದ?” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎತ್ತಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಹರ್ದೋಯ್ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದು, ಯುವತಿ ಹಾಗೂ ಆಕೆಯ ತಂದೆಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.