ತುಮಕೂರು:
ನಡೆದಾಡುವ ದೇವರು, ತ್ರಿವಿಧ ದಾಸೋಹಿ ನೆಲೆಸಿರುವ ಪ್ರಸಿದ್ಧ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇದೇ ಫೆಬ್ರವರಿ 20 ರಿಂದ ಮಾರ್ಚ್ 1 ರವರೆಗೆ ನಡೆಯಲಿದೆ. ಹೀಗಾಗಿ ಸಂಪ್ರದಾಯದಂತೆ ತುಮಕೂರು ನಗರದ ವಿವಿಧ ಭಾಗಗಳಲ್ಲಿ ಸಿದ್ದಗಂಗಾ ಮಠದ ಕಿರಿಯ ಶ್ರೀಗಳ ನೇತೃತ್ವದಲ್ಲಿ ಭಿಕ್ಷಾಟನೆಯನ್ನು ಮಾಡಿದರು.
ಫೆಬ್ರವರಿ 20ರಿಂದ ಮಾರ್ಚ್ ಒಂದರವರೆಗೆ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷ ಲಕ್ಷ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಅಲ್ಲದೇ ಜಾತ್ರೆಯ ಅಂಗವಾಗಿ ಮಠದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು, ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇನ್ನು ಸಂಪ್ರದಾಯದಂತೆ ಜಾತ್ರಾ ಅಂಗವಾಗಿ ಮಠದ ಶ್ರೀಗಳು ನಗರದ ವಿವಿಧೆಡೆ ಭಿಕ್ಷಾಟನೆ ಮಾಡುವುದು ವಾಡಿಕೆಯಾಗಿದೆ. ಅದರಂತೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ ನಗರದೆಲ್ಲೆಡೆ ಸಂಚರಿಸಿ ಭಿಕ್ಷಾಟನೆ ಮಾಡಿದರು. ಹಾಗೂ ತಾವು ಹೋದಲೆಲ್ಲಾ ಮಠದ ಜಾತ್ರೆಗೆ ಆಹ್ವಾನವನ್ನು ನೀಡಿದರು.
ಇನ್ನು ವಿಶೇಷ ಅಂದ್ರೆ ಸಿದ್ದಗಂಗಾ ಮಠ ಭಾವೈಕ್ಯತೆಯ ಪ್ರತೀಕವಾಗಿದೆ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾನೆ ಇದೆ. ಹೌದು, ರಸ್ತೆಯಲ್ಲಿ ತೆರಳುತ್ತಿದ್ದ ಶಿವ ಸಿದ್ದೇಶ್ವರ ಸ್ವಾಮಿಜಿಯನ್ನು ಮುಸ್ಲಿಂ ಭಾಂದವರು ತಮ್ಮ ಅಂಗಡಿಗೆ ಕರೆದು ತಮ್ಮ ಕೈಲಾದ ದೇಣಿಗೆಯನ್ನು ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದು ಮಾತ್ರ ವಿಶೇಷವಾಗಿತ್ತು.
ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿದ ಶ್ರೀಗಳನ್ನು ಭಕ್ತರು ಗೌರವದಿಂದ ಕಾಣಿದ್ದು, ತಮ್ಮ ತಮ್ಮ ಅಂಗಡಿಗಳಲ್ಲಿ ಅವರಿಗೆ ಗೌರವ ಅರ್ಪಿಸಿ, ಕಾಲಿಗೆ ನಮಸ್ಕರಿಸಿ ತಮ್ಮ ಕೈಲಾದ ದೇಣಿಗೆಯನ್ನು ನೀಡಿದ್ರು. ಈ ವೇಳೆ ಮಾತನಾಡಿದ ಮಠದ ಹಿರಿಯ ಭಕ್ತರೊಬ್ಬರು ಬಹಳ ಹಿಂದಿನಿಂದಲೂ ಜಾತ್ರೆ ಪ್ರಯುಕ್ತ ಭಿಕ್ಷಾಟನೆ ಮಾಡಿಕೊಂಡು ಬರಲಾಗ್ತಿದೆ. ಅದರಂತೆ ಸಿದ್ದಗಂಗಾ ಶ್ರೀಗಳು ಕೂಡ ಭಿಕ್ಷಾಟನೆ ಮಾಡಿದರು. ಈಗ ಕಿರಿಯ ಶ್ರೀಗಳ ನೇತೃತ್ವದಲ್ಲಿ ಮುಂದುವರೆಸಿಕೊಂಡು ಬರಲಾಗ್ತಿದೆ ಎಂದರು.