DHONI : ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ಕ್ರಿಕೆಟಿಗ ಎಂ.ಎಸ್. ಧೋನಿ ಇದೀಗ ಐಸಿಸಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ. ಧೋನಿ ಸೇರಿದಂತೆ ವಿಶ್ವದ 7 ಆಟಗಾರರಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹಾಲ್ ಆಫ್ ಫೇಮ್ ಗೌರವ ನೀಡಿದ್ದು, ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ.
ಇದು ಕ್ರಿಕೆಟ್‌ಗೆ ಅಸಾಧಾರಣ ಕೊಡುಗೆ ನೀಡಿದ ದಿಗ್ಗಜ ಆಟಗಾರರಿಗೆ ಐಸಿಸಿ ಸಲ್ಲಿಸುವ ವಿಶೇಷ ಗೌರವ. ಧೋನಿಯ ನಾಯಕತ್ವದ ಗುಣಗಳು ಹಾಗೂ ಕ್ರಿಕೆಟ್ ಗೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಧೋನಿ ಅವರನ್ನು ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲಾಗಿದೆ ಅಂತ ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಧೋನಿ ಜೊತೆಗೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲ, ಗ್ರೇಮ್ ಸ್ಮಿತ್, ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ, ಮಹಿಳಾ ಕ್ರಿಕೆಟಿಗರಾದ ಪಾಕಿಸ್ತಾನದ ಸನಾ ಮೀರ್ ಸೇರಿದಂತೆ ಒಟ್ಟು ಏಳು ಮಂದಿ ಕ್ರಿಕೆಟಿಗರು ಈ ಬಾರಿ ಹಾಲ್ ಆಫ್ ಫೇಮ್ ಗೆ ಪಾತ್ರರಾಗಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಅದರಲ್ಲೂ ಐಸಿಸಿ ಟೂರ್ನಿಯ ಮೂರು ಪ್ರಶಸ್ತಿಗಳನ್ನು ಪಡೆದ ಏಕೈಕ ಕ್ಯಾಪ್ಟನ್ ಅಂದರೆ ಅದು ಧೋನಿ. 2007ರಲ್ಲಿ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಅಲ್ಲದೆ 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಧೋನಿ ಪ್ರಮುಖ ಪಾತ್ರ ವಹಿಸಿದ್ದರು.
ಟೀಮ್ ಇಂಡಿಯಾ ಪರ 538 ಪಂದ್ಯಗಳನ್ನಾಡಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 26ನೇ ಸ್ಥಾನ ಅಲಂಕರಿಸಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಮಹೇಂದ್ರ ಸಿಂಗ್ ಧೋನಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.