ತುಮಕೂರು:
ದೊಡ್ಡ ದೊಡ್ಡ ಮಾಲ್ ಗಳಲ್ಲಿ ಆಫರ್ ಗಳನ್ನು ನೋಡಿದ್ದೇವೆ. ಬೈ ಒನ್ ಗೆಟ್ ಒನ್ ಫ್ರೀ ಅನ್ನೋ ಆಫರ್ ಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಈರುಳ್ಳಿ ಮಂಡಿ ಮಾಲೀಕ ಬರೀ ಈರುಳ್ಳಿ ಖರೀದಿ ಮಾಡಿದರೆ ಸಾಕು ಪ್ರತಿದಿನ ಗ್ರಾಹಕರಿಗೆ ಬಹುಮಾನ ಕೊಡ್ತಾ ಇದ್ದಾರೆ. ಯುಗಾದಿ ಹಬ್ಬಕ್ಕೆ ಚಿನ್ನದ ಉಂಗುರ ಉಡುಗೊರೆ ಕೊಡಲು ಮುಂದಾಗಿದ್ದಾರೆ.
ಈರುಳ್ಳಿ ಕೊಳ್ಳಿ ಬಹುಮಾನ ಗೆಲ್ಲಿ. ಹೀಗೊಂದು ಆಫರ್ ನ ಬೋರ್ಡ್ ತುಮಕೂರಿನ ಅಂತರಸನಹಳ್ಳಿಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದೆ. ಪಿ.ವಿ.ನೃಪತುಂಗ ಆ್ಯಂಡ್ ಸನ್ಸ್ ನ ಈರುಳ್ಳಿ ಮಂಡಿಯಿಂದ ವಿಶೇಷ ಆಫರ್ ಘೋಷಣೆ ಮಾಡಿದ್ದಾರೆ. ೧೦೦ ರೂ ಮೇಲ್ಪಟ್ಟು ಈರುಳ್ಳಿ ಖರೀದಿ ಮಾಡಿದವರಿಗೆ ಈ ಆಫರ್ ಅನ್ವಯವಾಗುತ್ತದೆ. ಈರುಳ್ಳಿ ಖರೀದಿಸಿದ್ದ ಪ್ರತಿಯೊಬ್ಬರಿಗೂ ಕೂಪನ್ ಕೊಡಲಾಗುತ್ತದೆ. ಅದರಲ್ಲಿ ಗ್ರಾಹಕರ ಮಾಹಿತಿ ಬರೆದು ಲಕ್ಕಿ ಡ್ರಾ ಡಬ್ಬಿಯಲ್ಲಿ ಹಾಕಬೇಕು. ಪ್ರತಿ ದಿನ ರಾತ್ರಿ ೭ ಗಂಟೆಗೆ ಗ್ರಾಹಕರ ಸಮ್ಮುಖದಲ್ಲೇ ಬಾಕ್ಸ್ ಓಪನ್ ಮಾಡಲಾಗುತ್ತದೆ. ಲಕ್ಕಿ ಡಿಪ್ ಮೂಲಕ ಕೂಪನ್ ಆಯ್ಕೆ ಮಾಡಲಾಗುತ್ತಿದೆ. ವಿಜೇತರಿಗೆ ಗೃಹ ಉಪಯೋಗಿ ವಸ್ತುಗಳನ್ನು ಬಹುಮಾನವಾಗಿ ಕೊಡಲಾಗುತ್ತಿದೆ.
ಈರುಳ್ಳಿ ಮಂಡಿ ಆರಂಭ ಮಾಡಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.೧ ರಿಂದ ಮೇ.೩೧ ರ ವರೆಗೆ ಪ್ರತಿದಿನ ಈ ಆಫರ್ ಮುಂದುವರಿಯಲಿದೆ. ಇನ್ನೂ ವಿಶೇಷ ಅಂದರೆ ಯುಗಾದಿ ಹಬ್ಬಕ್ಕೆ ಬಹುಮಾನ ವಿಜೇತ ಗ್ರಾಹಕರಿಗೆ ೧೦ ಗ್ರಾಂ ಚಿನ್ನದ ರಿಂಗ್ ಕೊಡುವ ಚಿಂತನೆ ಮಾಡಲಾಗಿದೆ. ಗ್ರಾಹಕರ ಆಕರ್ಷಣೆ ಮಾಡುವ ಉದ್ದೇಶ ಇದರ ಹಿಂದೆ ಇದ್ದರೂ, ದೊಡ್ಡ ದೊಡ್ಡ ಮಾಲ್ ಗಳಲ್ಲಿ ಆಫರ್ ಕೊಡುವಾಗ. ರೈತರ ಬೆಳೆಗಳಿಗೆ ಯಾಕೆ ಆಫರ್ ಕೊಡಬಾರದು ಅನ್ನೋದು ಮಂಡಿ ಮಾಲೀಕ ನೃಪತುಂಗರ ಅಭಿಪ್ರಾಯ. ಜೊತೆಗೆ ಪ್ರತಿದಿನ ಬೆಳಗ್ಗೆ ಮಂಡಿ ಓಪನ್ ಆದಾಗ ರೈತರ ಭಾವಚಿತ್ರಕ್ಕೆ ಪೂಜೆ ಮಾಡಿ ವ್ಯಾಪಾರ ಶುರು ಮಾಡೋದು ಮಂಡಿ ಮಾಲೀಕನ ಸಂಪ್ರದಾಯ. ಹಾಗಾಗಿ ರೈತರ ಬೆಳೆಗೆ ಆಫರ್ ನೀಡಿದ್ದೇನೆ ಎನ್ನುತ್ತಾರೆ ನೃಪತುಂಗ.
ಕೇವಲ ಈರುಳ್ಳಿಗೆ ಆಫರ್ ಕೊಟ್ಟು ಈ ಮಂಡಿ ಮಾಲೀಕ ಮುನ್ನೆಲೆ ಬಂದಿಲ್ಲ. ಮಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ೨೭ ರಿಂದ ೩೦ ಸಾವಿರ ರೂ ಸಂಬಳ ಕೊಟ್ಟು, ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು ಕೊಟ್ಟು ಗಮನ ಸೆಳೆದಿದ್ದರು. ಬಿ.ಇ. ಓದಿದವರಿಗೂ ೩೦ ಸಾವಿರ ಸಂಬಳ ಸಿಗದ ಈ ಕಾಲದಲ್ಲಿ, ಈರುಳ್ಳಿ ತೂಕ ಮಾಡೋನಿಗೆ ೩೦ ಸಾವಿರ ಕೊಡ್ತಾರಂತೆ ಎಂಬ ಜಾಹೀರಾತು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಮಿಲಿಯನ್ ಗಟ್ಟಲೆ ವೀಕ್ಷಣೆ ಕೂಡ ಅಗಿತ್ತು. ಒಟ್ಟಾರೆ ತುಮಕೂರಿನ ಈ ಈರುಳ್ಳಿ ಮಂಡಿ ಮಾಲೀಕ ಸದ್ಯ ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದಾರೆ.