ಹಾಸನ:
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೆಂಜಗುಂಡನಹಳ್ಳಿಯಲ್ಲಿ ತೋಟದಲ್ಲಿರುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ 5 ಹಸುಗಳು ಸಜೀವ ದಹನವಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ಹೆಂಜಗುಂಡನಹಳ್ಳಿಯ ಶಿವಣ್ಣ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಐದು ಹಸುಗಳು ಸೇರಿದಂತೆ ಒಂದು ಕರು ಸಜೀವ ದಹನವಾಗಿದೆ, ಹಾಗೂ ಕೊಟ್ಟಿಗೆಯಲ್ಲಿದ್ದ ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದೆ. ಶಿವಣ್ಣ ತೋಟದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಹದಿನೈದು ಸಾವಿರ ಕೊಬ್ಬರಿ ಮತ್ತು ಹತ್ತು ಸಾವಿರ ತೆಂಗಿನಕಾಯಿ ಬೆಂಕಿಹಾಗುತಿಯಾಗಿವೆ. ರಾತ್ರಿ ಹಸುಗಳನ್ನು ರೈತ ಶಿವಣ್ಣ ಕೊಟ್ಟಿಗೆಯಲ್ಲಿ ಕಟ್ಟಿ ಬಂದಿದ್ದರು, ಬೆಳಿಗ್ಗೆ ಹಾಲು ಕರೆಯಲು ಹೋಗಿ ನೋಡಿದಾಗ ಈ ಬೆಂಕಿ ಅವಘಡ ಸಂಭವಿಸಿರುವುದು ತಿಳಿದುಬಂದಿದೆ.
ಈ ಕುರಿತು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಇನ್ನು ಸುದ್ದಿ ತಿಳಿದು ಶಾಸಕ ಕೆ ಎಂ ಶಿವಲಿಂಗೇಗೌಡ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರೈತ ಶಿವಣ್ಣಗೆ ಧೈರ್ಯ ತುಂಬಿದ್ದಾರೆ.