ತುಮಕೂರು :
ತುಮಕೂರು ನಗರ ಈಗಾಗಲೇ ಗ್ರೇಟರ್ ಬೆಂಗಳೂರು ಆಗುವತ್ತ ದಾಪುಗಾಲಿಡುತ್ತಿರುವ ಸಿಟಿ. ಆದರೆ ಇಂತಹ ಸಿಟಿಯಲ್ಲಿ ಸಮಸ್ಯೆಗಳು ಮಾತ್ರ ಕಮ್ಮಿಯಾಗ್ತಿಲ್ಲ. ಪಾಲಿಕೆಯ ಅಧಿಕಾರಿಗಳ ಯಡವಟ್ಟಿನಿಂದ ಒಂದಿಲ್ಲೊಂದು ಅವ್ಯವಸ್ಥೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಸ್ಮಾರ್ಟ್ ಸಿಟಿ ವತಿಯಿಂದ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯ ಕಟ್ಟಿ ಒಂದು ವರ್ಷವಾದರೂ ಇನ್ನು ಉದ್ಘಾಟನೆಗೊಂಡಿಲ್ಲ. ಆದರೆ ಇಂತಹ ಶೌಚಾಲಯಕ್ಕೆ ಬರೋಬ್ಬರಿ 950 ರೂಪಾಯಿ ಕರೆಂಟ್ ಬಿಲ್ ಬಂದಿದೆಯಂತೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ದಿವಾಳಿಯಾಗಿದೆ. ಹೀಗಾಗಿ ಜಿಲ್ಲೆಗಳಿಗೆ ಅನುದಾನ ಬರ್ತಿಲ್ಲ ಅನ್ನೋ ಮಾತಿನ ನಡುವೆ ಇಂತಹದೊಂದು ವಿಚಿತ್ರ ಎದುರಾಗಿದೆ. ತುಮಕೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ನಗರದ ಹಲವೆಡೆ ಸ್ಮಾರ್ಟ್‌ಸಿಟಿ ಯೋಜನೆಯಿಂದ ಕಟ್ಟಿರುವ ಹಲವು ಶೌಚಾಲಯಗಳು ಉದ್ಘಾಟನೆ ಭಾಗ್ಯ ಕಾಣದೆ ಸೊರಗುತ್ತಿವೆ. ಇಂತಹ ಸಾಲಿಗೆ ಈಗ ಎಸ್‌ಐಟಿ ಬಡಾವಣೆಯಲ್ಲಿರುವ ಶೌಚಾಲಯ ಸೇರುತ್ತೆ. ಈ ಶೌಚಾಲಯ ಕಟ್ಟಿ ಒಂದು ವರ್ಷ ಆಗಿದೆ. ಆದರೆ ಇದುವರೆಗೂ ಶೌಚಾಲಯ ಓಪನ್ ಆಗಿಲ್ಲವಂತೆ. ಆದರೆಈ ಶೌಚಾಲಯಕ್ಕೆ ಬರೋಬ್ಬರಿ 950 ರೂಪಾಯಿ ಕರೆಂಟ್ ಬಿಲ್ ಬಂದಿರೋದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಶೌಚಾಲಯಕ್ಕೆ ಬಂದಂತಹ ವ್ಯಕ್ತಿಗಳು ಈ ವಿಚಾರವನ್ನು ತಿಳಿದು ಶಾಕ್ ಆಗಿದಾರೆ.
ಅಧಿಕಾರಿಗಳೇ ನೀವೇನೋ ಶೌಚಾಲಯ ನಿರ್ಮಿಸಿದ್ದೀರಿ, ಆದರೆ ಅದನ್ನು ಉದ್ಘಾಟನೆ ಮಾಡೋದನ್ನೆ ಮರೆತಿದ್ದೀರಿ. ಆದರೂ ಬಳಕೆಗೆ ಬಾರದ ಶೌಚಾಲಯಕ್ಕೆ ಕರೆಂಟ್ ಬಿಲ್ ಬಂದಿದೆ ಎಂದರೆ ನಿಮ್ಮ ಸ್ಮಾರ್ಟ್ ತನ ಯಾವ ಮಟ್ಟಕ್ಕೆ ಇದೆ ಅನ್ನೋದನ್ನು ತೋರಿಸುತ್ತದೆ.