ತುಮಕೂರು :
ನಮ್ಮ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 66 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ತುಮಕೂರಿನ ಕ್ರೀಡಾ ಆಸಕ್ತರಿಗಾಗಿ ಬೃಹತ್ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಮಹಾತ್ಮ ಗಾಂಧಿ ಕ್ರೀಡಾಂಗಣ ಉದ್ಘಾಟನೆ ಆಗಿ ಕೆಲವೇ ವರ್ಷಗಳಲ್ಲಿ ಹಳ್ಳ ಹಿಡಿಯುತ್ತಿರೋದು ಬೇಸರದ ಸಂಗತಿ.
ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಮ್ ಗೆ ಬರುವ ಕ್ರೀಡಾಪಟುಗಳಿಗಾಗಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಧುನಿಕ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರೋದರಿಂದ ಪಾಳು ಬಿದ್ದ ಸ್ಥಿತಿಗೆ ತಲುಪಿದೆ. ಇದರಿಂದ ಕ್ರೀಡಾಪಟುಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಒಂದುಕಡೆ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡ್ತಾ ಇಲ್ಲ. ಮತ್ತೊಂದುಕಡೆ ಕೆಲವೊಂದು ಶೌಚಾಲಯಕ್ಕೆ ಬೀಗ ಜಡಿಯಲಾಗಿದ್ದು, ಕುಡುಕುರ ಅಡ್ಡೆಯಾಗಿಯೂ ಮಾರ್ಪಡು ಮಾಡಿಕೊಂಡಿದ್ದು, ಅಲ್ಲಲ್ಲಿ ಮದ್ಯದ ಬಾಟಲ್ ಕೂಡ ಪತ್ತೆಯಾಗಿದೆ.
ಇನ್ನು ಈ ಕ್ರೀಡಾಂಗಣದಲ್ಲಿರೋ ಅತ್ಯಾಧುನಿಕ ಜಿಮ್‌ನನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಶೌಚಾಲಯವನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ, ಇದರಿಂದ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಕ್ರೀಡಾಂಗಣದಲ್ಲಿ ಶೌಚಾಲಯಕ್ಕೆ ಹೋಗಲು ಪರದಾಡುವಂತಾಗಿದೆ. ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡುವಾಗ ಇದ್ದ ಕಾಳಜಿ, ಅದರ ನಿರ್ವಹಣೆ ಮಾಡುವಲ್ಲಿ ಮಾತ್ರ ನಮ್ಮ ಅಧಿಕಾರಿಗಳಿಗೆ ಇರಲ್ಲ.
ಈ ಕುರಿತು ಹಲವು ಬಾರಿ ಕ್ರೀಡಾಪಟುಗಳು ಹಾಗೂ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ವರ್ಷಗಳಿಂದ ಬೀಗ ಜಡಿದ ಈ ಶೌಚಾಲಯಗಳು ಕೇವಲ ಹಣದ ವ್ಯರ್ಥವೆನಿಸಿವೆ. ಜನರ ಹಣದಿಂದ ನಿರ್ಮಿಸಿದ ಈ ಸೌಲಭ್ಯಗಳು ಫಲಕಾರಿಯಾಗದ ರೀತಿಯಲ್ಲಿ ಬಳಸಲಾಗುತ್ತಿದ್ದು, ಸಾರ್ವಜನಿಕ ಹಣದ ದುರುಪಯೋಗ ಮಾಡುತ್ತಿರುವುದಕ್ಕೆ ನೈಜ ಸಾಕ್ಷಿಯಾಗಿದೆ.