ದೇಶ :
ಭಾರತವು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿತ್ತು. ಆ ಮೂಲಕ ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರಿ ಕದನ ಬೇಡ ಎಂದು ಬೇಡಿಕೊಂಡಿತ್ತು. ಇದರ ಮಧ್ಯಸ್ಥಿಕೆಯನ್ನು ಅಮೆರಿಕಾ ಡೋನಾಲ್ಡ್ ಟ್ರಂಪ್ ವಹಿಸಿಕೊಂಡಿದ್ರು. ಇಂದು ಭಾರತ ಮತ್ತು ಪಾಕಿಸ್ತಾನ ಸಂಧಾನ ಸಭೆ ಕೂಡ ನಡೆದಿದೆ. ಬಳಿಕ ಭಾರತದ ಸೇನೆ ಮತ್ತೆ ಈ ಕ್ಯಾತೆ ತೆಗೆಯದಂತೆ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದೆ. ಇದರ ನಡುವೆ ಭಾರತೀರೆಲ್ಲರೂ ಹೆಮ್ಮೆ ಪಡುವ ವಿಷಯವೊಂದಿದೆ. ಅದೇನಪ್ಪ ಅಂದ್ರೆ 300 ಕೋಟಿ ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಉದ್ಘಾಟನೆಗೊಂಡಿದೆ.
ಹೌದು, ಇಡೀ ವಿಶ್ವ ಮತ್ತು ದೇಶದ ಜನತೆ ಭಾರತ ಮತ್ತು ಪಾಕಿಸ್ತಾನದ ಯುದ್ದದ ಕಡೆ ಗಮನವನ್ನ ಹರಿಸಿದ್ರು. ಇದರ ನಡುವೆ ಉತ್ತರ ಪ್ರ ದೇಶದಲ್ಲಿ 300 ಕೋಟಿ ವೆಚ್ಚದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಚಾಲನೆ ಸಿಕ್ಕಿದೆ. ಹೌದು, ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಲಕ್ನೋದ ನೋಡ್‌ನಲ್ಲಿ ವಿಶ್ವದ ಅತ್ಯಂತ ವಿನಾಶಕಾರಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ನ ಉತ್ಪಾದನಾ ಘಟಕ ವನ್ನು ಉದ್ಘಾಟಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಯಿಂದ ವರ್ಚುವಲ್ ಆಗಿ ಸಮಾರಂಭದಲ್ಲಿ ಭಾಗಿಯಾದ್ರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯೋಜನೆಗೆ ಚಾಲನೆ ನೀಡಿದರು.
ಈ ವೇಳೆ ವರ್ಚುಯಲ್ ಮೂಲಕವೇ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ''ಉತ್ತರ ಪ್ರದೇಶ ಮತ್ತು ನಮ್ಮ ಇಡೀ ದೇಶಕ್ಕೆ ಇದು ಐತಿಹಾಸಿಕ ದಿನವಾಗಿದೆ. ನಮ್ಮ ಸೇನಾಪಡೆಗಳಿಗೆ ಬಲ ನೀಡುವ, ಶತ್ರುಗಳನ್ನು ವಿನಾಶ ಮಾಡುವ ಆ ಶಕ್ತಿಯನ್ನು ಪೂಜಿಸುವ ದಿನ ಇದಾಗಿದೆ. ನನಗೆ ವೈಯಕ್ತಿಕವಾಗಿಯೂ ಒಂದು ಪ್ರಮುಖ ದಿನ. ಏಕೆಂದರೆ ನನ್ನ ನಗರ ಲಕ್ನೋ ಬಗ್ಗೆ ನನಗೆ ಒಂದು ಕನಸಿತ್ತು. ಭಾರತದ ರಕ್ಷಣಾ ವಲಯವನ್ನು ಬಲಪಡಿಸುವಲ್ಲಿ ನನ್ನ ನಗರವು ಪ್ರಮುಖ ಕೊಡುಗೆ ನೀಡುತ್ತದೆ. ಆ ಕನಸು ಈಗ ನನಸಾಗುತ್ತಿದೆ''. ವಾರ್ಷಿಕವಾಗಿ 80 ರಿಂದ 100 ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯವನ್ನು ಇದು ಒಳಗೊಂಡಿದೆ ಎಂದು ಹೇಳಿದರು.
ಇನ್ನು ಬ್ರಹ್ಮೋಸ್ ಉತ್ಪಾದನಾ ಘಟಕವನ್ನು ಸುಮಾರು 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶದ ಸರ್ಕಾರ 80 ಹೆಕ್ಟೇರ್ ಭೂಮಿಯನ್ನು ಉಚಿತವಾಗಿ ನೀಡಿದೆ. ಇದರ ನಿರ್ಮಾಣ ಕೇವಲ ಮೂರುವರೆ ವರ್ಷಗಳಲ್ಲಿ ಪೂರ್ಣಗೊಂಡಿದೆ. ಬ್ರಹ್ಮೋಸ್ ಕ್ಷಿಪಣಿ ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮವಾಗಿದೆ. ಇದು 290-400 ಕಿ.ಮೀ. ರೇಂಜ್ ಮತ್ತು ಮ್ಯಾಕ್ 2.8 ವೇಗವನ್ನು ಹೊಂದಿದೆ ಅಂದರೆ ಶಬ್ದದ ವೇಗಕ್ಕಿಂತ ಸುಮಾರು ಮೂರು ಪಟ್ಟು ಎನ್ನಲಾಗಿದೆ. ಈ ಕ್ಷಿಪಣಿಯನ್ನು ಭೂಮಿ, ಆಕಾಶ ಮತ್ತು ಸಮುದ್ರದಿಂದ ಉಡಾಯಿಸಬಹುದು. ಇದು 'ಫೈರ್ ಎಂಡ್ ಫಾರ್ಗೆಟ್' ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ಇದು ಶತ್ರುಗಳ ರಾಡಾರ್‌ನಿಂದ ತಪ್ಪಿಸಿಕೊಂಡು ನಿಖರವಾಗಿ ಗುರಿ ತಲುಪುತ್ತದೆ. ಒಟ್ಟಾರೆ ಬ್ರಹ್ಮೋಸ್ ಸ್ವದೇಶಿ ನಿರ್ಮಿತ ಕ್ಷಿಪಣಿಯಾಗಿದ್ದು, ನಮ್ಮ ದೇಶದ ಸೈನ್ಯಕ್ಕೆ ಬಲ ತುಂಬುವ ಮತ್ತೊಂದು ಅಸ್ತ್ರ ಸೇರ್ಪಡೆಯಾದಂತಾಗಿದೆ.